ಕವನ

 ನೀನಿರಬೇಕಿತ್ತು

ನೀನಿರಬೇಕಿತ್ತು,
ಎದೆಯ ಮರುಭೂಮಿಯಲ್ಲಿ ಮರಿಚೀಕೆಯಾಗಿ
ಹತ್ತಿ ಉರಿತಿಹ ಪ್ರೀತಿಗೆ ಬತ್ತಿಯಾಗಿ
ಬಿಟ್ಟ ನೋವಿಗೆ ದಿವ್ಯ ಔಷಧಿಯಾಗಿ

ನೀನಿರಬೇಕಿತ್ತು,
ಬಾರದ ನಿದ್ರೆಗಳ ಜೋಗುಳವಾಗಿ
ಬಲು ದೂರದಿ ನಿಂತ ಗುಡ್ಡಗಳ ಮೌನವಾಗಿ
ಮೌನದೀ ಮಾತಾಡೋ ಮೋಡಗಳಾಗಿ

ನೀನಿರಬೇಕಿತ್ತು,
ಅಮ್ಮನ ಆರೋಗ್ಯವಾಗಿ
ಸೋರುವ ಛಾವಣಿಯ ಬೀಳದ ಹನಿಯಾಗಿ
ಎದೆಮೇಲೆ ಕಾಲಿಟ್ಟಾಗ ಸಂತೋಷದೀ ನೋವಾಗಿ

ನೀನಿರಬೇಕಿತ್ತು,
ತಂತುವಾದ್ಯದ ವಿರಹ ರಾಗವಾಗಿ
ಬಿಕ್ಕಿ ಕೂತಿಹ ನೋವಿಗೆ ಭಾರವಾಗಿ
ಸಾಲು ಮರದ ನಡುವಿನ ಸಣ್ಣ ಕತ್ತಲೆಯಾಗಿ

ನೀನಿರಬೇಕಿತ್ತು,
ಹುಸಿಗೋಪ ಪ್ರದರ್ಶಿಸುವ ಪೇಯಸಿಯಾಗಿ
ಸುಖ-ದುಃಖದೀ ಭಾಗಿಯಾಗುವ ಸ್ನೇಹಿತನಾಗಿ
ತಪ್ಪೆಸಗಿದರೂ ಕ್ಷಮಿಸುವ ಅವ್ವನಾಗಿ

ಆದರೆ;

ನೀನಾದೆ;
ಎಂದಿಗೂ ಅಳಿಯದ ನೋವಾಗಿ
ಎಂದಿಗೂ ಆರದ ಮೌನದ ಕಾವಾಗಿ
ಗೆಲುವೇ ಇಲ್ಲದ ವಿರಹ ಗೀತೆಯಾಗಿ
ಮುಗಿಯದೇ ಇರುವ ಕವನವಾಗಿ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು