ಶುಕ್ರವಾರ, ಡಿಸೆಂಬರ್ 20, 2013


ನಿರುದ್ದೇಶ ತಿಕ್ಕಲಿನ ಹುಡುಕಾಟದಲ್ಲಿ...ಹಾಗೆ ನೋಡಿದರೆ ಮಾನವ ಜನುಮ ಬಲು ದೊಡ್ಡದು ಎಂದು ಯಾವ ರೀತಿಯಿಂದ ಹೇಳಿದರೋ ಗೊತ್ತಿಲ್ಲ. ಮರುಕ್ಷಣವೇ ಇಲ್ಲವಾಗುವ ಬದುಕನ್ನು ಜನುಮಗಳಿಗೆ ಹೋಲಿಸಿಕೊಂಡು ಬಲು ದೊಡ್ಡದು ಎನ್ನುವುದು, ನಮ್ಮೆಲ್ಲ ಹುಟ್ಟಿನ ಹಿಂದೆ ಒಂದು ದೊಡ್ಡ ಉದ್ದೇಶವಿದೆಯೆಂದು ಹೇಳಲಾದೀತೆ? ನಮ್ಮೆಲ್ಲ ಭಾವ ,ಕ್ರಿಯೆಯನ್ನು ನಂಬಿಕೆಯೊಂದೇ ಪೋಷಿಸುತ್ತಾ ಬಂದಿರುವುದು. ಹಾಗಾಗಿ ಮಾನವ ಜನುಮ ಬಲು ದೊಡ್ಡದು ಎಂದು ನಂಬಿದರೆ ಸತ್ಯ ಇಲ್ಲವಾದಲ್ಲಿ ಸುಳ್ಳು.

ಇಂತಹುದೊಂದು ಆಲೋಚನೆ ಎದ್ದಿದು ಆಸ್ಪತ್ರೆಯ ಕಮಟು ವಾಸನೆಯಲ್ಲಿ ಅರವತ್ತು ವರ್ಷವಾದರೂ ಎಂತಾ ಹುಡುಗಿಯನ್ನು ನಾಚಿಸುವಷ್ಟು ಕೆಲಸ ಮಾಡುತ್ತಾ ಓಡಾಡುತ್ತಾ ಇದ್ಡ ಅಮ್ಮನಿಗೆ ಪಿತ್ತಕೋಶದಲ್ಲಿ ಅದೆಂತಹುದೋ ಕಲ್ಲಿವೆ ಆಪರೇಷನ್ ಮಾಡಬೇಕು ಎಂದಾಗ ಅದೊಂದು ಅಂತಾ ದೊಡ್ಡ ಖಾಯಿಲೆ ಅನಿಸಲಿಲ್ಲ ಅದೇ ಪಿತ್ತಕೋಶವನ್ನು ಕತ್ತರಿಸಿ ಇದೇ ನೋಡಿ ನಿಮ್ಮ ಅಮ್ಮನ ಪಿತ್ತಕೋಶ ಎಂದು ತೋರಿಸಿದಾಗ ಮೂರ್ಛೆ ಬಿದ್ದಿದ್ದೆ. ಅದೇ ಪಿತ್ತಕೋಶ ಪರೀಕ್ಷೆಗೆ ಕಳಿಸಿ ಅದರ ವರದಿ ಬಂದಾಗ ಅದೊಂದು ದೊಡ್ಡ ಶಾಕ್ GLADBLADDER CANCER T3 STAGE ಅದೊಂದು ಅಪರೂಪದ ಕ್ಯಾನ್ಸರ್ ಅದರ ಲಕ್ಷಣಗಳು ಮಾಮೂಲಿ ಕ್ಯಾನ್ಸರ್‌ನ ಹಾಗೇ ಮೊದಲೇ ಕಾಣಿಸಿಕೊಳ್ಳುವುದಿಲ್ಲ ಹೀಗೆ ಯಾವುದಾದರೂ ಆಪರೇಷನ್ ಮಾಡಿದರೆ ಅದರ ವರದಿಯಲ್ಲಿ ಬಂದಿರುತ್ತದೆ. ಇದೊಂದು ವಿಷಾದಕರ BUY ONE GET ONE FREE OFFER. ಕಿಮೋತೇರಪಿಯಿಂದಲು ಇದು ಗುಣವಾಗುತ್ತೆ ಅಂತಾ ಹೇಳಲಾಗದು ಎಂದು ಡಾಕ್ಟರ್ ಹೇಳುತ್ತಿದ್ದರೆ ಮನದಲ್ಲಿ ಸ್ಮಶಾನ ಮೌನ ಆ ಕ್ಷಣಕ್ಕೆ ಮಾನವ ಜನುಮ ಬಲು ಚಿಕ್ಕದು

ಇಂತಹುದೊಂದು ಸಂದಿಗ್ದ ಸ್ಥಿತಿ ಮಾನವನನ್ನು ಬಿಟ್ಟರೆ ಬೇರಾವ ಪ್ರಾಣಿಗಳನ್ನು ಕಾಡುವುದಿಲ್ಲ. ನಾಯಿ ತನ್ನ ಸತ್ತ ಮರಿಯನ್ನು ಸಹ ಒಮ್ಮೆ ಮೂಸಿ ಕೊನೆಯ ವಿದಾಯದಂತೆ ಬಾಲ ಅಲ್ಲಾಡಿಸಿಕೊಂಡು ಸಿಕ್ಕ ಮರಕ್ಕೋ ಗಾಡಿಗೊ ಒಮ್ಮೆ ಕಾಲೆತ್ತಿ ಉಚ್ಚೆ ಉಯ್ದು ತಂಗಳನ್ನು ಹುಡುಕಿ ಹೋಗಿಬಿಡುತ್ತೆ ಅದಕ್ಕೆ ಮೋಹವಿಲ್ಲ ಕಣ್ಣೀರಿಲ್ಲ ತಲ್ಲಣವಿಲ್ಲ ಹೆಚ್ಚಾಗಿ ದುಃಖವಿಲ್ಲ. ಅದಕ್ಕೂ ಮಿಗಿಲಾಗಿ ನಾಳೆಯ ಒಂಟಿತನದ ಭಯವಿಲ್ಲ. ಆದರೆ ಒಂದು ಸಾವು ಮಾನವನನ್ನು ತೀರಾ ಒಂಟಿಯಾಗಿಸಿಬಿಡುತ್ತೆ.

ನಮ್ಮ ಜೊತೆಯಲ್ಲೇ ಸುಮಾರು ವರ್ಷಗಳಿಂದ ಓಡಾಡುತ್ತಾ ತೀರಾ ಆಪ್ತವಾಗಿದ್ದ ಗೆಳೆಯನೊಬ್ಬ ಒಂದು ಮುಂಜಾವಲ್ಲಿ ಒಬ್ಬಳ ಮೋಹಕ್ಕೆ ಬಿದ್ದು ಮರೆತೆಬಿಡುತ್ತಾನೆ. ಆ ಕ್ಷಣ ತೀರಾ ಕಾಡುವ ಕೆಣಕುವ ಬಯ್ಯುವ ಅಸೂಯೆ ಪಡುವ ದ್ವೇಷಿಸುವ ಎಷ್ಟೋ ಭಾವಗಳು ಬಂದುಬಿಡುತ್ತವೆ ಇನ್ನೂ ಅವನು ಬಿದ್ದ ಮೋಹ ಇವನ ಮೋಹವಾಗಿದ್ದರೆ ಮುಗಿಯಿತು ಅದೊಂದು ಶೀತಲ ಸಮರ. ಇವೆಕ್ಕೆಲ್ಲಾ ಕಾರಣ ಅದೇ ನಂಬಿಕೆ .ಅವನೆಂದೂ ಇವರ ಹತ್ತಿರ ನಾನು ಯಾವ ಹುಡುಗಿಯ ಸಂಗವು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದಿಲ್ಲ,ಹಾಗೆ ನಂಬಿರುತ್ತಾರೆ ಹಾಗಾಗಿ ಅವನ ಮಾಮೂಲಿ ಬದಲಾವಣೆ ಕೂಡ ಒಂದಷ್ಟು ದುಃಖ ನೋವು ಪಾಠಗಳನ್ನು ಕಲಿಸಿ ಹೋಗುತ್ತದೆ. ಇನ್ನೂ ಅವನೆಲ್ಲ ಮರೆತು ಮೊದಲ ಹಾಗೆ ಇರುವುದಕ್ಕೆ ಅಹಂ ಹುಸಿ ಆದರ್ಶಗಳು ಅಡ್ಡಬರುತ್ತೆ. ಅದಕ್ಕೆ ಕ್ಷಮಿಸೋ ವ್ಯಕ್ತಿ ಎಲ್ಲರಿಗಿಂತಾ ದೊಡ್ಡವನಾಗಿಬಿಡುತ್ತಾನೆ.

ಮನುಷ್ಯ ಬಿಟ್ಟರೆ ಯಾವ ಪ್ರಾಣಿಗಳಿಗೂ ಇಂತಹ ಸ್ನೇಹ ಬಾಂಧವ್ಯವಿರುವಿದಿಲ್ಲ ಎಷ್ಟೇ ಜೊತೆಯಾಗಿದ್ದರು ಆಹಾರಕ್ಕಾಗಿ ಕಿತ್ತಾಡುತ್ತವೆ. ಬೆದೆಗೆ ಬಂದಾಗ ಕಿತ್ತಾಡಿಕೊಂಡೇ ಮಿಲನ ಮಾಡುತ್ತವೆ ಹೊರತು ಅದೇ ದ್ವೇಷದಲ್ಲಿ ಮುಳುಗುತ್ತ ಬದುಕುವುದಿಲ್ಲ ಹಾಗೆ ನೋಡಿದರೆ ಪಾವಿತ್ರ್ಯ ಎನ್ನುವುದು ಮನುಷ್ಯನನ್ನು ಅಷ್ಟೇ ಬಾಧಿಸುವುದು. ಹಾಗಾಗಿ ಪಾವಿತ್ರ್ಯ ಒಂದು ವ್ಯಸನ ಎನ್ನುವುದು ತಪ್ಪಲ್ಲ. ಪಾವಿತ್ರ್ಯವವನ್ನು ಬಯಸುವುದು ಒಂದು ತೆರನ ಬಲಾತ್ಕಾರ.

ಮೊನ್ನೆ ಜಿಯಾಗ್ರಫಿ ಚಾನೆಲಿನಲ್ಲಿ ಅದ್ಯಾವುದೋ ಇಲಿಯ ಬಗ್ಗೆ ತೋರಿಸಿದರಂತೆ ನನ್ನ ಸ್ನೇಹಿತ ಹೇಳಿದ ಆ ಇಲಿ ಒಂದಷ್ಟು ವರ್ಷ ಎಲ್ಲ ಇಲಿಗಳಂತೆ ಬೆಳೆಯುತ್ತದೆ ಒಂದು ಹಂತಕ್ಕೆ ಬಂದಾಗ ಸಿಕ್ಕ ಸಿಕ್ಕ ಹೆಣ್ಣು ಇಲಿಗಳನ್ನು ಹುಡುಕಿಕೊಂಡು ಬಲವಂತದಿ ಕೂಡುತ್ತದೆಯಂತೆ ಈ ಕೂಡುವ ಯುದ್ದದಲ್ಲಿ ತನ್ನ ಆಹಾರವನ್ನೇ ಮರೆತುಬಿಡುತ್ತದೆಯಂತೆ. ಹೀಗೆ ಕೂಡುತ್ತಾ ಕೂಡುತ್ತಲೆ ಸಾವನ್ನಪ್ಪುತ್ತದ್ದಂತೆ. ಆ ಇಲಿಗೆ ಏಡ್ಸ್ ಆಗಲಿ ಅದರ ಸಹಚರ ಇಲಿಗಳಿಗೆ ದ್ವೇಷ ಅಸೂಯೆ ಆಗಲಿ ಕಾಡುವುದಿಲ್ಲ. 
ಯಾವ ಕಾಡುಪ್ರಾಣಿಗಳಿಗೂ ಆಸ್ಪತ್ರೆಯ ಅವಶ್ಯವಿಲ್ಲ.
ಯಾವ ಪ್ರಾಣಿಯೂ ಸಲಿಂಗಕಾಮಿ ಆಗಿರುವದ್ದನ್ನು ಕೇಳಿಲ್ಲ 
ಯಾವ ಪ್ರಾಣಿಗೂ ದ್ವಂದ್ವ ದ್ವೇಷ ಅಸೂಯೆಯಾಗಲೀ ಒಂಟಿತನದ ಭಯವಾಗಲಿ ಕಾಡುವುದಿಲ್ಲ ಆಹಾರಕ್ಕಾಗಿ ಅಷ್ಟೇ ಅವುಗಳ ಅನ್ವೇಷಣೆ ಹೋರಾಟ ಒದ್ದಾಟ

ಇವೆಲ್ಲ ನೋಡಿದರೆ ಯಾವ ಪ್ರಾಣಿಗೂ ಮನುಷ್ಯನಿಗೂ ಸೇರಿ ಹುಟ್ಟಿಗೆ ಒಂದು ಘನ ಉದ್ದೇಶವಿರುವುದಿಲ್ಲ ಅನಿಸುತ್ತದೆ ಅವೆಲ್ಲ ನಮ್ಮ ನಂಬಿಕೆಗಳಷ್ಟೇ. ಇದ್ದಷ್ಟು ದಿನ ಬಂದ ಹಾಗೆ ಬದುಕುವುದೇ ಧರ್ಮವೇನೋ ಅನಿಸುತ್ತೆ ಈ ದೃಷ್ಟಿಯಿಂದ ಓಶೋನ ಪ್ರತಿ ವಾಕ್ಯವು ನಿಜವೆನಿಸುತ್ತೆ. 

ಮಠ ಸಿನಿಮಾದಲ್ಲಿ ಜೈಲ್ ಒಂದರ ದೃಶ್ಯದಲ್ಲಿ ಮಂಡ್ಯ ರಮೇಶರ ಡೈಲಾಗ್ ಹೀಗಿದೆ " ಅಲ್ಲ ಕನ್ಲಾ ಬಡ್ಡೆತದೆ ಅವ್ನ್ಯಾವನೋ ನಿನ್ನ ಹೆಂಡ್ರು ಸೀರೆ ಎಳೆದ ಅಂತಾ ಕೊಚ್ಚಿಹಾಕಿ ಡೈಲಿ ನೀನು ಎಳೆಯೊ ಚಾನ್ಸ್ ಮಿಸ್ ಮಾಡ್ಕಂಡ್ಯಲ್ಲ" ಹೀಗೆ ನಾವೆಲ್ಲ ಅದ್ಭುತ ಕ್ಷಣಗಳನೆಲ್ಲ ಯಾವುದೋ ವಿಚಿತ್ರ ಥಿಯರಿಗಳಿಂದ ಕಳೆದುಕೊಳ್ಳುತ್ತಿದ್ದೇವೆ.

ಭಟ್ಟರ ಸಾಲಿನೊಂದಿಗೆ ಈ ತಿಕ್ಕಲು ಲೇಖನವ ಅಂತ್ಯ ಹಾಡುವ:

"ಇಷ್ಟೇ ಸ್ವಾಮಿ ಬಾಳ ಮರ್ಮ
ಬಂದ ಹಾಗೆ ಬದುಕೋದೆ ಧರ್ಮ."
-- ಸೋಮವಾರ, ನವೆಂಬರ್ 11, 2013


ಕತಾ ಶೀರ್ಷಿಕೆ:  ಜಯಂತ

ಹೈ ವೇಲಿ ಕುಡಿದ ಕಾಫಿಯ ರುಚಿಯಿನ್ನು ಬಾಯಲ್ಲಿ ಹಾಗೇ ಇದೆ.ಅದನ್ನ ಗೆಳೆಯ ರಜನೀಶ್ FLAVOUR ಅನ್ನುತ್ತಾನೆ. ಕಾಫಿ ಕುಡಿದ ಮೇಲೆ ಆತ ಏನನ್ನೂ ಕುಡಿಯುವುದಿಲ್ಲ ಆ FLAVOUR ಮಜ ಕೊಡುತ್ತೆ ಅಂತಾನೆ. ಆ ಮಾತು ಈ ಕ್ಷಣದಲ್ಲಿ ಅರ್ಥವಾಗುತ್ತಿದೆ. ಬೆಂಗಳೂರು ಬಿಟ್ಟಾಗ ರಾತ್ರಿ ಒಂಭತ್ತಾಗಿತ್ತು ಈಗ ಹನ್ನೊಂದುವರೆ ಇನ್ನೊಂದೆರಡು ಕಿಲೋಮೀಟರುಗಳಾಚೆ ರಜನೀಶನ ಊರು. ಎ.ಕಾಳೇನಹಳ್ಳಿ. ಅಮವಾಸ್ಯೆ ಬೇರೆ ಕತ್ತಲು ಗವ್ವೆನುತ್ತಿದೆ, ರಸ್ತೆಯ ಎರಡು ಕಡೆ ಕಬ್ಬು, ರಾತ್ರಿ ಹನ್ನೊಂದುವರೆಯ ತಂಗಾಳಿ, ಸುಮಾರು ಎಂಭತ್ತರ ವೇಗದಲ್ಲಿ ನನ್ನ ಬುಲೆಟ್ ಗಾಡಿ ಓಡುತ್ತಿದೆ. ಹೆಲ್ಮೆಟ್ ಗೆ, GOGGLE ಗೆ ಅದ್ಯಾವುದೋ ಕೀಟಗಳು ಬಡಿದು ಸಾಯುತ್ತಿವೆ. ಹೋದಸಾರಿ ಬಂದಾಗ ಇನ್ನೂ ಹೆಚ್ಚಿನ ಕತ್ತಲಿತ್ತು.ವರ್ಷದಲ್ಲಿ ಹಳ್ಳಿ ಸಿಟಿಯಾಗಿಬಿಟ್ಟಿದೆ ಸೋಗು ನಾಗರೀಕತೆ ಹೆಜ್ಜೆಯಿಟ್ಟುಬಿಟ್ಟಿದೆ.ಅನಾಮಿಕ ಊರಿನಲ್ಲಿ ಅಮವಾಸ್ಯೆ ಕತ್ತಲಲ್ಲಿ ಬೈಕ್ ಓಡಿಸುವ ಥ್ರಿಲ್ ಇದೆಯಲ್ಲ ಅದು ಅನುಭವಿಸಿದರೇನೆ ಅರಿವಾಗುವುದು.

ರಜನೀಶ ಹೊರಬಂದ. ಅದೇ ರಜನೀಶ ನನ್ನ ತಪ್ಪುಗಳ ತಿದ್ದುವ,ನಿಷ್ಕಲ್ಮಶ ನಗೆಯ,ಬೆಚ್ಚನೆ ಅಪ್ಪುಗೆಯ ರಜನೀಶ. ಬಂದು ಮೊದಲಿನಂತೆಯೆ ಸ್ನೇಹದ ಅಪ್ಪುಗೆ ಕೊಟ್ಟ. ಬಾ ಪಾ ಪುಣ್ಯಾತ್ಮ ಎಂದು ಒಳ ಕರೆದು ಬಚ್ಚಲು ಮನೆ ತೋರಿಸಿದ.ನೀರು ಕೊರೆಯುತ್ತಿತ್ತು ಮುಖಕ್ಕೆ ಎರಚಿಕೊಂಡರೆ ಒಂತರಾ ಸುಖ, ಕಣ್ಣು ಉರಿ. ಅವನ ರೂಮಿನಲ್ಲಿ ಅರ್ಧ ಮಡಿಚಿಟ್ಟ ಭೈರಪ್ಪರ ಪರ್ವಯಿತ್ತು.ದೇಶಾವರಿ ಮಾತು ಆದ ಮೇಲೆ ಒಂದೊಳ್ಳೆ ಊಟ. ಮಲಗುವ ವೇಳೆ ಕೇಳಿದ "ಏನ್ ವಿಜಯ್ ಇದ್ದಕ್ಕಿದ್ದಂಗೆ ಇಲ್ಲಿಗೆ ಬಂದಿದ್ದು" ಅಂತಾ. ಹೇಳಬೇಕು ಅಂದುಕೊಂಡೆ ಸುಮ್ಮನಾಗಿ ಸುಮ್ನೆ ಬೆಂಗಳೂರು ಬೇಜಾರಾಯ್ತು ಅಂದೆ.


ನೀರವ ಕತ್ತಲು. ಒಂದು ವರ್ಷವಾಗಿಬಿಟ್ಟಿತ್ತಲ್ಲ!! ಹೋದವರ್ಷ ಹತ್ತು ಲಕ್ಷದ ಪ್ಯಾಕೇಜನ್ನು ನಯವಾಗಿ ತಿರಸ್ಕರಿಸಿ ರಾಜೀನಾಮೆ ಕೊಟ್ಟು ಇಲ್ಲಿಗೆ ಬಂದುಬಿಟ್ಟಿದ್ದ ರಜನೀಶ, ಯಾಕೆ ಏನು ಎತ್ತ ಹೇಳಿರಲಿಲ್ಲ, ನಾನು ಮುಂಬೈಯಲ್ಲಿದ್ದಾಗ ಒಂದು ಸಾರಿ ಫೋನ್ ಮಾಡಿ ಗ್ರಾಮೋದ್ಧಾರ, ವ್ಯವಸಾಯ ಏನೇನೋ ಹೇಳಿದ್ದ. ನಿಜಕ್ಕೂ ಬೆಂಗಳೂರು ಒಮ್ಮೊಮ್ಮೆ ಹಾಗೆನಿಸಿಬಿಡುತ್ತದೆ ಎಲ್ಲಾದರೂ ಓಡಿಹೋಗಬೇಕು ಅಂತಾ. ರಜನೀಶ ಬಚಾವಾದ ನಾನು ಇನ್ನು ಆಗಿಲ್ಲ. ಅಸಲು ನನ್ನದೇ ಅಂತಾ ಒಂದು ಊರು ಇಲ್ಲ ಸೂರು ಇಲ್ಲ.ಇಲ್ಲಿಗೆ ಬಂದ ಉದ್ದೇಶವೇ ಬೇರೆ.

ಸುಮಾರು ಮೂರು ವರ್ಷಗಳ ಹಿಂದೆ ನಾನು, ಅವಿನಾಶ ,ರಜನೀಶ ಸಾಲಿಗ್ರಾಮಕ್ಕೆ ಹೋಗಿದ್ದೆವು, ಕಾರಂತರ ಮನೆಯ ಹೊಕ್ಕು ಮಾಲಿನಿ ಮಲ್ಯರ ಜೊತೆ ಹರಟಿದ್ದೆವು. ಅವರು ಕಾರಂತರ ಬಗ್ಗೆ ಚೆನ್ನಾಗಿ ಹೇಳಿದ್ದರು, ಅವರ ಬರಹ, ವ್ಯವಸಾಯ,ಹೋರಾಟ,ಅಲೆದಾಟ,ಸಮಾಜ ಸೇವೆ,ಸಿಟ್ಟು,ವಿಧವಾ ವಿವಾಹ,ಕು.ವೆಂ.ಪು ಗಿಂತ ಕಾರಂತರು ಹೇಗೆ ಭಿನ್ನ ಹೀಗೆ ಹತ್ತು ಹಲವು. ಅದೊಂದು ಹಿತವಾದ ಭೇಟಿ. ಆನಂತರ ನನ್ನನ್ನು ಮನೆ,ಬಡತನ,ಬದುಕಿನ ಅವಸರ, ಅನಿವಾರ್ಯತೆ ಹೀಗೆ ಎಲ್ಲವೂ ಎಲ್ಲಿಗೆ ಕೊಂಡುಹೋಯಿತು. ಅವಿನಾಶ ಅದ್ಯಾವುದೋ ಬೇಡವಾದ ವಿಷಯಕ್ಕೆ ದೂರವಾದ, ಅದು ನಿಜಕ್ಕೂ ಬೇಡವಿತ್ತು. ಥೂ ಬೇಡ ಅಂದರೂ ನೆನಪಾಗುತ್ತೆ. ಅಸಲು ಆತನಿಗೆ ನಾನು ನೋವು ಕೊಟ್ಟೆನೆಂದು ಅವನ ವಾದ ಇರಬಹುದು, ಆದರೆ ಅವನಿಂದ ನನಗೂ ಅಷ್ಟೇ ನೋವಾಗಿಲ್ಲವೇ!! ಥೂ ಮತ್ತೆ ನೆನಪಾಗುತ್ತೆ!! ಅಮೇಲೆ ರಜನೀಶ ಜರ್ಮನ್ ಗೆ ಹೋದದ್ದು, ನನ್ನ ಎಂಜಿನಿಯರಿಂಗ್ ಆಗಿ ಕೆಲಸಕ್ಕೆ ಒದ್ದಾಟ, ಕೊನೆಗೂ ವೋಲ್ಟಾಸ್ ನಲ್ಲಿ ಕೆಲಸ ನನಗೆ ಮೂರು ಲಕ್ಷ ಪ್ಯಾಕೇಜು ಎಂದು ಖುಷಿಯಾಗಿರುವಾಗ ರಜನೀಶ ಹತ್ತು ಲಕ್ಷದ ಪ್ಯಾಕೇಜನ್ನು ತಿರಸ್ಕರಿಸಿ ಇಲ್ಲಿಗೆ ಬಂದುಬಿಟ್ಟ.


ಮುಂಬೈಗೆ ಬಂದ ಮೇಲೆ ಮಾನವ ಸಂಬಂಧಗಳ ಬಗ್ಗೆ ಪಿ.ಎಚ್.ಡಿ ಮಾಡೋ ಒಂದು ತಿಕ್ಕಲು ಐಡಿಯಾ ಬಂದು ಸಿಕ್ಕಸಿಕ್ಕ ಬುಕ್ಕುಗಳನ್ನು ಓದಿದೆ, ಹಲವರನ್ನು ಮಾತಾಡಿಸಿದೆ, ಗೌರೀಶ ಕಾಯ್ಕಿಣಿ,ಕು.ವೆಂ.ಪು,ಕಾರಂತ,ಭೈರಪ್ಪ,ಕುಂ.ವೀ ಒಬ್ಬರ ಇಬ್ಬರಾ? ಎಲ್ಲರ ಕಾದಂಬರಿ ಓದಿದೆ,ಈ ನಡುವೆ ನನ್ನ ಅವಿನಾಶನ ನಡುವೆ ಬಂದ ದ್ರಾಕ್ಷಯಿನಿಯ ನೆನೆಪಾಗುತಿತ್ತು ಜೊತೆಗೆ ನಮ್ಮಲ್ಲಿ ಸ್ಫೋಟಗೊಂಡ ಭಿನ್ನತೆ ಅರ್ಥವಾಗುತ್ತಿತ್ತು. ಮಾನವ ಸಂಬಂಧಗಳಲ್ಲಿ ಅತೀ ತಲೆಕೆಡಿಸಿದ್ದು ಗಂಡು ಹೆಣ್ಣಿನ ಸಂಬಂಧ.ನಾಗರೀಕತೆಯ ನೆವದಲ್ಲಿ ಸಂಬಂಧಗಳು ನಶಿಸುತ್ತಿದೆಯಾ ಎಂಬ ಆತಂಕ. ಈ ಮಧ್ಯೆ ಅನಾಮಿಕನೊಬ್ಬ ಪರಿಚಯನಾದ ಆತ ಅದೆಷ್ಟು ಚೆನ್ನಾಗಿ ಗಂಡು ಹೆಣ್ಣಿನ ಸಂಬಂಧ ಬಗ್ಗೆ ಮಾತನಾಡುತ್ತಿದ್ದ ಎಂದರೆ ಸಮಯ ಹೋಗುತ್ತಿದ್ದುದ್ದೇ ಗೊತ್ತಾಗುತ್ತಿರಲ್ಲಿಲ್ಲ. ಆತ ಕೊನೆ ದಿನ ಹೇಳಿದ್ದು " ಮನುಷ್ಯ ಎಂದೆಂದಿಗೂ ಮೋಹಿಯೇ ಒಪ್ಪಲಿ ಬಿಡಲಿ ಅಲ್ಲಗೆಳೆಯುವಂತಿಲ್ಲ. ಕೆಲವೇ ಕೆಲವರು ಅದನ್ನು ಮೀರಿದ್ದಾರೆ ಅವರು ದೇವತಾ ಮನುಷ್ಯರು, ಆದರೆ ದೇವರೆನ್ನೊಲ್ಲ ಯಾಕೆಂದರೆ ಮೋಹ ದೇವರನ್ನು ಕಾಡಿದೆ, ಅಮರತ್ವ ಮೋಹವನ್ನು ಹುಟ್ಟು ಹಾಕೊಲ್ಲ, ದೇವರು ಅಮರ ಅವನು ಮೋಹವನ್ನು ಮೀರಿದರು ಅದರಲ್ಲಿ ಅರ್ಥವೇನಿಲ್ಲ, ಆದರೆ ಅಮರತ್ವವೇ ಇಲ್ಲದ ಮನುಷ್ಯ ಮೋಹವನ್ನು ಮೀರುತ್ತಾನೆ ಎಂದರೆ ಆತ ನಿಜಕ್ಕೂ ಗ್ರೇಟ್. ಅವನನ್ನು ಬುದ್ಧ ಅನ್ನು, ವಿವೇಕಾನಂದ ಅನ್ನು.ಮೋಹದಲ್ಲಿ ಸ್ವಂತ ಮೋಹ, ಕಂಡವರ ಮೋಹ ಎಂಬ ವಿಭಾಗಗಳಿಲ್ಲ, ಯಾರನ್ನೋ ನೀ ಮೊಓಹಿಸಿದರೆ ಅದು ಸ್ವಂತ, ನಿನ್ನ ಗೆಳೆಯನ ಗೆಳತಿಯನ್ನೋ, ಅವನ ಗುಪ್ತ ಸಖಿಯನ್ನೋ ಮೋಹಿಸಿದರೆ ಅದು ಕಂಡವರ ಮೋಹ ಏನಲ್ಲ. ಮೋಹ ಒಂದೇ. ಹಾಗೇ ವಿಭಜಿಸುವವರು ಕೂಡ ಕಂಡವರ ಮೋಹವನ್ನೇ ಬೆನ್ನತ್ತಿತ್ತುತ್ತಾರೆ, ಅವರ ಮೋಹಕ್ಕೆ ಅಡ್ಡವಾದವರನ್ನು ಅವರದೇ ದೃಷ್ಟಿಯಲ್ಲಿ ವಿರೋಧಿಸುತ್ತ ಆತ್ಮಲೋಲುಪತೆಯಲ್ಲಿ ಮುಳುಗಿರುತ್ತಾರೆ. ಮೋಹವನ್ನು ಬಿಡಲು ಹೋದವರು ಅದರಲ್ಲೇ ಸಾಯುತ್ತಿರುತ್ತಾರೆ, ಅದರಲ್ಲೇ ಇರಲು ಬಯಸುವವರು ಅದರಿಂದ ಮೀರಿ ಬೆಳೆಯುತ್ತಿರುತ್ತಾರೆ"
 ಅರೇ ಹೌದಲ್ಲ ದ್ರಾಕ್ಷಾಯಿನಿ ಅವಿನಾಶನಿಗೂ ಮುಂಚೆ ಅಜೇಯನ ಜೊತೆ ಇದ್ದಳಲ್ಲ!!


ಅಸಲು ಇಲ್ಲಿಗೆ ಬಂದ ಉದ್ದೇಶವು ನನ್ನ ಪಿ.ಎಚ್.ಡಿ ಯ ನೆಪದಲ್ಲೇ, ಮಾಲಿನಿ ಮಲ್ಯರನ್ನು ಮಾತಾನಾಡಿಸುವಾಗ ಕಾರಂತರು ಎಷ್ಟೋ ವಿಧವೆಯರಿಗೆ ಮರು ವಿವಾಹ ಮಾಡಿದ್ದು ಹೇಳಿದ್ದರು ಅದು ನನ್ನನ್ನು ತುಂಬಾ ಕಾಡಿತ್ತು. ಒಂದು ಮಿಸ್ಡ್ ಕಾಲ್ ಸಂಬಂಧವನ್ನು ಹಾಳು ಮಾಡುವ ಈ ದಿನದಲ್ಲಿ, ಸಂಸಾರವೇ ಮಾಡಿ ಗಂಡ ಸತ್ತ ವಿಧವರೆಯನ್ನು ಮದುವೆಯಾಗೋ ಗಂಡಸರ ಮನೋಸ್ಥಿತಿ ಹೇಗಿರುತ್ತೆ, ಮದುವೆಯ ನಂತರ ಅವರಲ್ಲಿ ಭಿನ್ನಾಭಿಪ್ರಾಯವೇ ಇಲ್ಲವೇ, ಅಸಲು ಅವರಿಬ್ಬರೂ ನಿಜವಾಗಿಯೂ ಒಂದಾಗಿರುತ್ತಾರ? ಇಂತಾ ಹಲವು ಪ್ರಶ್ನೆಗಳು ಕಾಡಿದ್ದವು. ಅಂತಹಾ ಯಾರದರೊಬ್ಬ ದಂಪತಿಯನ್ನು ಭೇಟಿ ಆಗುವ ಉದ್ದೇಶದಿಂದ ಮಾಲಿನಿ ಮಲ್ಯರಿಗೆ ಪತ್ರ ಬರೆದಿದ್ದೆ. ಅವರು ಕಾರಂತರ 1986 ರಲ್ಲಿ ಮಾಡಿದ ಕೊನೆಯ ವಿಧವಾ ವಿವಾಹದ ದಂಪತಿಗಳ ವಿಳಾಸ ಕೊಟ್ಟಿದ್ದರು. ಅದು ಶ್ರವಣಬೆಳಗೊಳ. ಅದೇ ಕಾರಣಕ್ಕೆ ರಜನೀಶ ಮನೆಗೆ ಬಂದದ್ದು. ಇಲ್ಲಿಂದ ಸುಮಾರು ಹದಿನೈದು ನಿಮಿಷದ ಬೈಕ್ ಹಾದಿ. ನಾಳೆ ಹೋಗಬೇಕು. ಸದ್ಯ ಮೂರು ಗಂಟೆಯಾದರು ಮಲಗಬೇಕು


                                                               ॒॒॒॒॒॒॒॒

 ನಾಗೇಂದ್ರರಾಯರ ಮನೆಯ ಬಾಲ್ಕನಿಯಿಂದ ಬಾಹುಬಲಿಯ ದಿವ್ಯ ಸುಪ್ತ ಧ್ಯಾನಸ್ಥ ಮುಖ ಕಾಣುತ್ತದೆ. ಅದನ್ನು ಸಂಜೆ ರಂಗಲ್ಲಿ ನೋಡುತ್ತಿದ್ದರೆ ಸಾಕು ಧ್ಯಾನಸ್ಥನಾಗಿಬಿಡುತ್ತೇವೆ. ನಾಗೇಂದ್ರರಾಯರು ಬೆಳಗೊಳಕ್ಕೆ ಬಂದ ಹೊಸತರಲ್ಲಿ ಬುದ್ಧನ ವಿಚಾರಗಳಿಂದ ಪ್ರಭಾವಿತರಾಗಿದ್ದರಂತೆ ಬೆಳಗೊಳದ ಬಸದಿಗಳಲ್ಲಿ ಹೊತ್ತಲ್ಲದ್ದ ಹೊತ್ತಲ್ಲಿ ಧ್ಯಾನಸ್ಥರಾಗುತ್ತಿದ್ದರಂತೆ. ಅವರ ಪತ್ನಿ ಸುನಂದಮ್ಮ ಹಾಸನದವರು. ಅವರು ಮಾಡಿಟ್ಟ ನೀರ್ ದೋಸೆ ತಿನ್ನುತ್ತಾ ನಾನು ಬಂದ ಕಾರಣ ಹೇಳಿದೆ, ಇಬ್ಬರು ಒಬ್ಬರ ಮುಖವನ್ನೊಮ್ಮೆ ನೋಡಿ ಮುಗುಳ್ನಕ್ಕರು..

ರಾಯರು ಬನ್ನಿ ವಿಜಯ್ ಹಾಗೇ ಸುತ್ತಾಡಿ ಬರುವ, ಬರೋ ಅಷ್ಟರಲ್ಲಿ ಕೋಳಿ ಸಾರು ರೆಡಿ ಇರುತ್ತೆ. ಸುನಂದ ಚೆನ್ನಾಗಿ ಮಾಡುತ್ತಾಳೆ ಕೋಳಿಸಾರು ಎನ್ನುತ್ತ ಹೆಜ್ಜೆಹಾಕಿದರು,ನಾನು ಹೆಜ್ಜೆ ಹಾಕತೊಡಗಿದೆ. ಅವರು ಮನೆಯಿಂದ ಒಂದು ಮೈಲು ವಿಂಧ್ಯಗಿರಿ.ಅಲ್ಲೊಂದಷ್ಟು ಬಸದಿಗಳಿವೆ. ಇಡೀ ಜನ ಬಾಹುಬಲಿಯ ನೋಡಲು ಹೊರಟುಬಿಡುತ್ತಾರೆ ಈ ಬಸದಿಗಳು ಮೌನವಾಗಿರುತ್ತವೆ. ಜನ ಕಮ್ಮಿ. ಪ್ರತಿ ಬಸದಿಯಲ್ಲೂ ಗಾಢಮೌನ, ಮನ ಕಲಕುವ ನೀರವ, ರಾಯರು ಮೂಲೆಯಲ್ಲಿದ್ದ ಬಸದಿಯ ಮೆಟ್ಟಿಲಲ್ಲಿ ಕುಳಿತು ನನ್ನನ್ನು ಕುಳಿತುಕೊಳ್ಳಲು ಹೇಳಿದರು. ಗಿರಿಯಿಂದ ಇಡೀ ಬೆಳಗೊಳ ಸುಂದರವಾಗಿ ಕಾಣುತ್ತಿತ್ತು. ನಮ್ಮಿಂದ ಸ್ವಲ್ಪದೂರದಲ್ಲಿ ಹಾವೊಂದು ಹರಿದು ಕಣ್ಮರೆಯಾಯ್ತು. ರಾಯರು ಮಾತಾಡಲು ಶುರುಹಚ್ಚಿದರು

"ನಾನು ನೋಡಿದ ಅಷ್ಟು ಪ್ರೇಮವಿವಾಹಗಳು ವಿವಾಹ ನಂತರ ತೀರ ಸಪ್ಪೆಯಾಗಿಬಿಟ್ಟಿದ್ದವು. ಮದುವೆ ಮುಂಚೆ ಇದ್ದ ಆ ಕಾತುರ ಪ್ರೀತಿ ಹಾರೈಕೆ ಎಲ್ಲವೂ. ಆಶ್ಚರ್ಯವಾಗುತ್ತಿತ್ತು. ಒಮ್ಮೆ ಗೆಳೆಯ ಸಂಜಯನನ್ನು ಕೇಳಿದೆ ಏಕೆ ಹೀಗೆ ಎಂದು. ಆತ ಓಶೋನ ಒಂದು ವಾಕ್ಯವನ್ನು ಹೇಳಿದ 'ನೀನು ಗಾಢವಾಗಿ ಪ್ರೀತಿಸಿದ ಹುಡುಗಿ ಸಿಗದಿದ್ದರೆ ಅವಳು ಸಿಕ್ಕಿದ್ದರೆ ಹೀಗಿರುತ್ತಿರಲಿಲ್ಲವೇನೋ ಎಂಬ ಒಂದು ಭಾವವಾದರೂ ಇರುತ್ತೆ, ಪ್ರೀತಿಸಿ ಮದುವೆಯಾದವನಿಗೆ ಅದು ಕೂಡ ಇರೊಲ್ಲ'. ಹೇಳಿ ಸುಮ್ಮನಾದ. ಮತ್ತೆಂದೂ ನನ್ನ ಆ ಪ್ರಶ್ನೆ ಕಾಡಲಿಲ್ಲ ಹಾಗೇ ಮುಂಗುರುಳು ಸರಿಸಿ ನನ್ನ ತಿರಸ್ಕರಿಸಿದ ಅವಳೂ ಕೂಡ. ಆ ಕಾಲಕ್ಕೆ ನಾನು ಕಾರಂತರ ದೊಡ್ಡ ಅಭಿಮಾನಿ. ದಿನಗಟ್ಟಲೇ ಅವರ ಕಾದಂಬರಿಗಳನ್ನು ಓದುತ್ತಿದ್ದೆ. ಅವರ ಮೈ ಮನಗಳ ಸುಳಿಯಲ್ಲಿ ಅಗಾಧವಾಗಿ ಕಾಡಿತು ಗಂಡು ಹೆಣ್ಣಿನ ಸಂಬಂಧವನ್ನು ಅದಕ್ಕಿಂತ ಇನ್ನ್ಯಾವ ಕೃತಿಯೂ ಹೇಳಲು ಅಸಾಧ್ಯ. ವ್ಯಾಸರ ಕೆಲ ಕತೆಗಳು ಬಿಟ್ಟು.ಬದುಕು ಯಾಕೋ ತೀರ ನೀರವ ಅನಿಸತೊಡಗಿತು. ಎಲ್ಲವೂ ಮುಖವಾಡ ಅನಿಸತೊಡಗಿತು. ಎಲ್ಲರದೂ ಅವರವದೇ ದೃಷ್ಟಿ, ಅವರ ಆಸೆಗಳಿಗೆ, ಭಾವನೆಗಳಿಗೆ, ಅಭಿಪ್ರಾಯಕ್ಕೆ, ಅಭಿಮತಕ್ಕೆ ಸ್ವಲ್ಪವೂ ಕುತ್ತಾಗಬಾರದು ಕುತ್ತಾದರೆ ಮುಖವಾಡ ಕಳಚಿಕೊಂಡು ಕುರೂಪರಾದಂತೆ ಕಾಣತೊಡಗಿತು.ಎಲ್ಲದ್ದರ ಹಿಂದೆ ಅದ್ಯಾವುದೋ ಕಾಣದ ಕಾರಣ. ಸೀದಾ ಕಾರಂತರ ಬಳಿ ಹೋದೆ. ಅವರು ಅವರದೇ ಶೈಲಿಯಲ್ಲಿ ಸತ್ಕರಿಸಿದರು. ಆಗ ಅವರಲ್ಲಿ ನನ್ನ ಆಸೆ ಇಟ್ಟೆ ನಾನು ವಿಧವೆಯನ್ನು ಮದುವೆಯಾಗಲು ಬಂದಿದ್ದೀನಿ. ಅವರು ಏನನ್ನೋ ನೆನಸಿಕೊಂಡು ಹಾಸನದ ಬಳಿ ಒಂದು ಹೆಣ್ಣಿದೆ ಆಗುವೆಯಾ ಎಂದರು.ಒಪ್ಪಿದೆ ಮದುವೆಯಾಯ್ತು' ಎಂದು ಹೇಳಿ ಸುಮ್ಮನಾದರು.ನಾನು ಮದುವೆ ಇಷ್ಟು ಸಲೀಸ ಎಂದುಕೊಂಡೆ.

ರಾಯರಿಗೊಬ್ಬ ಮಗನಿದ್ದ ಜಯಂತ ಎಂದು. ದಾರ್‍ಈಲಿ ಬರುವಾಗ ಆತ ಇತ್ತೀಚೆಗೆ ತೀರಾ ಮಂಕಾಗಿದ್ದಾನೆ ಎಂದು ರಾಯರೇ ಹೇಳಿದರು
                                                                       ------------------

ಆತನ ಸಮಸ್ಯೆ ಇಷ್ಟೇ ಆತ ಭವ್ಯ ಎಂಬ ಹುಡುಗಿಯ ಪ್ರೀತಿಸಿದ್ದ. ಅವಳು ಅವನ ಗೆಳೆಯ ರಾಜುನ ಗೆಳತಿ. ಆಕೆಯನ್ನು ಮದುವೆಯಾಗುತ್ತೀನಿ ಅಂತಾ ರಾಜುವಿಗೆ ಹೇಳಿದ್ದ.ರಾಜು ಇದೇ ಖುಷಿಗೆ ಪಾರ್ಟಿ ಮಾಡುವ ಎಂದು ಬಾರಿಗೆ ಕರೆದೊಯ್ದು ಕುಡಿದ ಮತ್ತಿನಲ್ಲಿ ಭವ್ಯಳನ್ನು ನಾನು ಈ ಹಿಂದೆ ಪ್ರೀತಿಸುತ್ತಿದ್ದೆ, ಆಕೆ ನನಗೆ ಮುತ್ತು ಸಹ ಕೊಟ್ಟಿದ್ದಳು, ಫೇಸ್ ಬುಕ್ಕಿನಲ್ಲಿ ಇಡೀ ದಿನ ಚಾಟ್ ಮಾಡಿದ್ದೇವು, ಅಲ್ಲೆಲ್ಲೋ ಓಡಾದಿದ್ದೆವು ಎಂದೆಲ್ಲ ತಡಬಡಿಸಿದ್ದ. ಅದರ ಮಾರನೇ ದಿನದಿಂದ ಜಯಂತ ಭವ್ಯರ ನಡುವೆ ಅನುಮಾನ,ಕಿತ್ತಾಟ ಶುರುವಾಯ್ತು. ಆನಂತರ ಆಕೆ 'ನಿನಗೋಸ್ಕರ ಕಾಯ್ತ ಇರ್ತೀನಿ' ಎಂಬ ಸಿನಿಮ್ ಡೈಲಾಗ್ ಹೇಳಿ ಹೋಗಿದ್ದಳು. ಆತನಿಗೆ ಅವಳನ್ನು ಮದುವೆಯಾಗುವ ಆಸೆ ಆದರೆ ಅವನನ್ನು ತುಂಬಾ ಕಾಡುತ್ತಿದ್ದುದು ರಾಜುವಿಗೆ ಅವಳು ಕೊಟ್ಟ ಮುತ್ತು,ಅಪ್ಪುಗೆ,ಸುತ್ತಾಟ.

ಬರುವ ಮುನ್ನ ಜಯಂತನಿಗೆ ಹೇಳಿದ್ದು ಒಂದೇ " ಜಯಂತ ಮೂವತ್ತು ವರ್ಷದ ಹಿಂದೆ ನಿಮ್ಮಪ್ಪ ನಿಮ್ಮಮ್ಮನನ್ನು ನೀನು ಈಗಾಗಲೇ ಒಬ್ಬರೊಂದಿಗೆ ಮೈ ಮನ ಎರಡೂ ಹಂಚಿಕೊಂಡಿದ್ದೀಯಾ ಎಂದು ಹೇಳಿ ತಿರಸ್ಕರಿದ್ದರೆ. ನಿಮ್ಮಮ್ಮನಿಗೆ ಒಂದು ಸುಂದರ ಬದುಕು ಕಟ್ಟಿಕೊಳ್ಳಲು ಆಗುತ್ತಿರಲಿಲ್ಲ.ಯೋಚಿಸು"

                                                          -----------------

ಬೆಳಗೊಳದಿಂದ ಬಂದ ಮೇಲೆ ಗಂಡು ಹೆಣ್ಣಿನ ಒಂದು ಚಿತ್ರಣ ಸಿಕ್ಕಿತು. ನನ್ನ ಪಿ.ಎಚ್.ಡಿ ಪ್ರಬಂದ ಮುಂದುವರೆಯುತ್ತಿದೆ. ಅಮ್ಮ ನನಗೊಂದು ಸುಂದರ ಹುಡುಗಿಯನ್ನು ಹುಡುಕಿದ್ದಾಳೆ.