ನನ್ನ ಕಥೆಗಳು
ಕರಿಮುಗಿಲುಗಳ ನಡುವೆ
"ಬೆಳಕಿನ ವೇಗದಲ್ಲಿ ನೀನಿದ್ದಾಗ ಎಲ್ಲವೂ ಶೂನ್ಯವಾದಂತೆ ಭಾಸವಾಗುತ್ತದೆ; ಅಸಲು ಶೂನ್ಯವೇ ಆಗಿರುತ್ತದೆ"
ಯಾವುದೋ ಅನಾಮಧೇಯ ವಿಜ್ಞಾನಿಯ ಈ ವಾಕ್ಯ ನನ್ನೊಳಗೆ ಎನನ್ನೋ ಹುಟ್ಟಿಹಾಕಿರಬೇಕು!. ಇಲ್ಲದಿದ್ದರೆ ಇಷ್ಟೊಂದು ಕಾಡುವ ಅಗತ್ಯವೇನಿತ್ತು? ಈ ಪ್ರವಾಹಭರಿತ ’ಜಲಧಾರಿನಿ’ ತುಂಬಿ ಹರಿವಾಗ, ಅದರಲ್ಲಿ ಕೊಚ್ಚಿಹೋಗೋ ಸಾವಿರ ಕಲ್ಮಶಗಳ ನಡುವೆ ಇಂತಹುದೊಂದು ಪ್ರಶ್ನೆ ಯಾಕೆ ನನ್ನ ಕಾಡಬೇಕು? ಅದು ನನ್ನದಲ್ಲದ ಪ್ರಶ್ನೆಗೆ!.
ಕರಿಮುಗಿಲಕಾಡು;
ಈ ಹೆಸರೇ ವಿಚಿತ್ರತೆರನದು ಕರಿಮುಗಿಲೆಂದರೆ ಕಪ್ಪಾದ ಮುಗಿಲುಗಳು. ಮುಗಿಲುಗಳು ಸೇರಿ ಕಾಡಾದೀತೆ? ಕಾದಾಡಿತಷ್ಟೇ. ಇಂತಹುದೊಂದು ವಿಚಿತ್ರ ಊರಿಗೆ ನಾಗರೀಕತೆ ತುದಿಯಲ್ಲಿರೋ ಬೆಂಗಳೂರಿನಿಂದ ಬಂದಿದ್ದಾದರೂ ಯಾಕೆ? ಊರಿಗೆ ಊರು ಅಲ್ಲವಿದು; ದಟ್ಟಕಾಡಿನಲ್ಲಿ ಪುಟ್ಟ ಕಾಂಕ್ರೀಟ್ ಗುಹೆ ನಮ್ಮದು. ಇಲ್ಲಿ ನಮ್ಮದು ಪ್ರಾಣಿ ತರೆನ ಜೀವನ; ಇಲ್ಲ, ನನಗೆ ಹಾಗೇ ಭಾಸವಾಗುತ್ತಿರಬೇಕು. ಕಾಡಿಗೆ ಅಲ್ಲ ಕಾಡಿನಂತ ಊರಿಗೆ ಉತ್ತರಾಭಿಮುಖವಾಗಿ ಹರಿವ ’ಜಲಧಾರಿನಿ’ ನದಿ ಎಷ್ಟೋ ಬಾರಿ ಕಪ್ಪಾಗಿದೆ. ಮೇಲಣ ಮುತ್ತಿಕೊಂಡ ಕಪ್ಪು ಮೋಡಗಳಿಂದ. ಮೈಸೂರಿನ ಗೊಮ್ಮಟಗಿರಿಯಿಂದ ನಮ್ಮಪ್ಪ ನೇರವಾಗಿ ಇಲ್ಲಿಗೆ ಬಂದನಂತೆ, ಏನನ್ನೂ ಕಂಡೋ ಗೊತ್ತಿಲ್ಲ. ಮದುವೆಯಾದ ಹೊಸತರಲ್ಲಿ ಊಳಿಡುವ ನರಿಗಳಿಗೆ, ಅದರ ಸರಗಳಿಗೆ ಅಮ್ಮ ನಿಂತಲ್ಲಿಯೇ ಉಚ್ಚೆ ಉಯ್ಯುತ್ತಿದ್ದಲಂತೆ. ಅಪ್ಪ ಸರಹೊತ್ತಿನಲ್ಲಿ ಮನೆಗೆ ಬರುತ್ತಿದ್ದನಂತೆ. ಆಗ ಅವನ ಮುಖ ಕಪ್ಪಾಗಿರುತಿತ್ತಂತೆ!.
ಅಸಲು ಅಪ್ಪನದು ವಿಚಿತ್ರ ವ್ಯಕ್ತಿತ್ವ. ಆತನಿಗೆ ಆ ಕಾಲದಲ್ಲೇ ಓದಲೂ ಗೊತ್ತಿತ್ತು, ಬರೆಯಲೂ ಸಹ. ಅಪ್ಪನ ಡೈರಿಯಲೀ ವಿಚಿತ್ರ ವಿಚಿತ್ರ ಶ್ಲೋಕ, ಗೀತೆ, ಒಗಟು, ಕತೆಗಳೆಲ್ಲಾ ಇದೆ. ಹೊತ್ತು ಕಳೆಯಲು ಅದನ್ನು ಓದುತ್ತಿದ್ದೇನೆ. ಈಗೀಗ ಅಪ್ಪ ಆಪ್ತನಾಗಿಬಿಟ್ಟಿದ್ದಾನೆ. ಅಮ್ಮನಿಗೆ ಅಸ್ತಮಾ. ಆಕೆ ರಾತ್ರಿ ಹೊತ್ತಿನಲ್ಲಿ ನರಿಗಳಂತೆ ಕೆಮ್ಮುತ್ತಾಳೆ, ನರಿಗಳು ಕೆಮ್ಮುವುದಿಲ್ಲ ಊಳಿಡುತ್ತವೆ. ರಾತ್ರಿ ಹೊತ್ತು ಬೆಚ್ಚುತ್ತಾಳೆ. ನನ್ನ ಕೈ ಹಿಡಿಯುತ್ತಾಳೆ ಪ್ರೀತಿಯ ಮಗನ ತಣ್ಣನೆ ಕೈಗಳಿಗಿಂತ, ಅಪ್ಪನ ಬಿಸಿ ಕೈಗಳು ಅವಕ್ಕೆ ಮದ್ದಾಗಬಹುದೇನೋ. ಅದನ್ನು ಹುಡುಕುವಂತೆ ನನ್ನ ಕೈ ಹಿಡಿದು ಬೆಚ್ಚಗೆ ಮಲಗುತ್ತಾಳೆ.
ನನಗಿಬ್ಬರೂ ಅಣ್ಣಂದಿರರಿದ್ದಾರೆ. ಒಬ್ಬನ ಹೆಸರು ’ಪರದೇಸಿ’ ಇನ್ನೊಬ್ಬನ ಹೆಸರು’ಪೂರ್ವ’. ಹೆಸರೇ ವಿಚಿತ್ರವಲ್ಲವೇ. ಅವೆರಡು ಅವರ ನಿಜವಾದ ಹೆಸರು. ಬೆಂಗಳೂರಿನ ನಾಗರಿಕತೆಗೆ ಹೆದರಿ ಪರದೇಸಿ ’ಪರಂಧಾಮ್’ ಎಂತಲೂ, ಪೂರ್ವ ’ಮೋಹನ್’ ಎಂತಲೂ ಬದಲಾಯಿಸಿಕೊಂಡಿದ್ದಾರೆ.
" ನನ್ನ ಹುಚ್ಚು ಅಲೆದಾಟದ ನೆವದಲ್ಲಿ ಸಾವಿರ ಅರ್ಥಗಳು ಹೊಳೆಯುತ್ತವೆ. ಜಲಧಾರಿನಿಯ ಸೆರೆಯಲ್ಲಿ, ತೆಕ್ಕೆಯಲ್ಲಿ ಹಲವು ಮರಣ ಹೊಂದಿದ ಹಳದಿ ಎಲೆಗಳು ಮೆರವಣಿಗೆ ಹೊರಡುತ್ತವೆ. ಅವನ್ನೆಲ್ಲ ಕಂಡಾಗ ಮೇಲೆ ಹೇಳಿದಂತೆ ಸಾವಿರ ಅರ್ಥಗಳು ಹೊಳೆಯುತ್ತವೆ. ಮಾದಿ( ನನ್ನ ಹೆಂಡತಿ ) ಅಲ್ಲಿ ಕತ್ತಲ ಕೋಣೆಯಲ್ಲಿ, ಕಾಡಿನಂತ ಊರಿನಲ್ಲಿ ಒಬ್ಬಳೇ ಇರುತ್ತಾಳೆ. ಆಕೆ ನಿಜಕ್ಕೂ ಸುಂದರಿ. ಆದರೆ ನನ್ನನ್ನು ಮದುವೆಯಾಗಲೂ ಹಠಹಿಡಿದವಳು. ಜೀವನ ಎಂದರೇನು? ಎಂದು ಕೇಳಿದವಳು. ಅದೇ ಉತ್ತರದ ನೆವದಲ್ಲಿ ಈ ಅಲೆದಾಟ. ಕೋಣೆಯ ಅದ್ಯಾವುದೋ ಮೂಲೇಲಿ ಗುಬ್ಬಿ ಮರಿಯಂತೆ ಹೆದರಿ ಕುಳಿತಿರುತ್ತಾಳೆ; ಕುಕ್ಕರುಗಾಲಲ್ಲಿ. ನಾನು ಹೋದೊಡನೆ ಬೆದರಿ, ನನ್ನ ಗುರುತಾಗಿ ಓಡಿ ಬಂದು ತಬ್ಬಿಕೊಳ್ಳುತ್ತಾಳೆ. ಆಗ ಇಬ್ಬರೂ ಕತ್ತಲಲ್ಲಿ ಕತ್ತಲಾಗುತ್ತೇವೆ. ಅಂತಹ ಒಟ್ಟು ಕತ್ತಲುಗಳ ಮೂರ್ತ ರೂಪವೇ ’ಪರದೇಸಿ’ ನನ್ನ ಹಿರಿ ಮಗ. ನಾನು ಕಂಡುಕೊಳ್ಳಲಾರದ ಉತ್ತರಗಳಿಗೆ ಅವನು ಉತ್ತರನಾದ ಎಂಬ ಭರವಸೆಗೆ ಅವನಿಗೆ ಆ ಹೆಸರನ್ನಿಟ್ಟೆ"
ಅಪ್ಪನ ಡೈರಿಯ ಹೆಸರಿಲ್ಲದ ಪುಟದಲ್ಲಿ ನನ್ನ ಹಿರಿ ಅಣ್ಣನ ಹಿಸ್ಟರಿಯಿದೆ. ಎಷ್ಟು ಬಾರಿ ಓದಿದರೂ ಅರ್ಥವಾಗಲಿಲ್ಲ; ಈಗ ಅವನಿಗೆ ಹುಚ್ಚಿಡಿದಿದೆ. ಅಪ್ಪನಂತೆ ಮಾತನಾಡುತ್ತಾನಂತೆ ಎಂದು ಅಮ್ಮ ಹೇಳುತ್ತಾಳೆ. ಬಹುಶಃ ನಮ್ಮತ್ತಿಗೆ ಆತನನ್ನು ಈ ಹೊತ್ತು ಅಲ್ಲಿ ದೂರದ ಬೆಂಗಳೂರಿನಲ್ಲಿ ಗದರಿಸುತ್ತಿರಬೇಕು.
"ನಾನು ನನ್ನ ಪೂರ್ವಿ( ನನ್ನ ಹಳೆಯ ಪೇಯಸಿ ) ಗೊಮ್ಮಟಗಿರಿಯ ನೀಲಗಿರಿ ತೋಪುಗಳ ನಡುವೆ ಅಡ್ಡಾಡ್ಡುತ್ತಿರುತ್ತೇವೆ. ಈಗಲೂ ಸಹ. ಅವಳಿಗೂ ಮದುವೆಯಾಗಿದೆ ಮಕ್ಕಳಿಲ್ಲ. ಈ ದಿನ ಅದೇ ಸುದ್ದಿಯಲ್ಲಿ ಮಿಂದವರಿಗೆ ಅದೇನೂ ರಭಸ ಬಂದಿತೋ ಗೊತ್ತಿಲ್ಲ. ಆಕೆ ನನ್ನ ಕೆಡವಿಕೊಂಡು ತನ್ನಾಸೆಯನ್ನೆಲ್ಲಾ ನನ್ನಲ್ಲಿ ಸುರಿಸತೊಡಗಿದಳು. ನಾನು ಕ್ಷಣಕಾಲ ಬೆಚ್ಚಿದ್ದರೂ ಸಾವರಿಸಿಕೊಂಡು ಉತ್ತರ ನೀಡಿದೆ. ಉತ್ತರದ ಕೊನೆಯಲ್ಲಿ ಅವಳು ತೃಪ್ತಿಯಾದದ್ದು ಅವಳ ಮುಖಭಾವವೇ ಹೇಳುತ್ತಿತ್ತು. ಈ ಹಿಂದೆಯೂ ಆಕೆ ನನ್ನೊಂದಿಗೆ ಹೀಗೆ ಸೆಣಸಿದುಂಟು. ಆಗೆಲ್ಲ ಸೋತು ಹೋಗುತ್ತಿದ್ದ ನಾನು ಈ ದಿನ ಗೆದ್ದೆ; ಮೀಸೆ ತಿರುವಿದೆ. ಆನಂತರ ಒಬ್ಬರಿಗೊಬ್ಬರೂ ಅಂಟಿಕೊಂಡು ನಾ ಬರೆದ ಕವಿತೆಗಳ ಹಾಡಿಕೊಂಡು ಊರಿಗೆ ಬಂದೆವು. ಅವಳು ಎಡಕ್ಕೆ ತಿರುಗಿ ಕಾಲುದಾರಿ ಹಿಡಿದಳು. ಮನೆಗೆ ಬಂದಾಗ ಚಂದ್ರ ನಗುತ್ತಿದ್ದ; ಮನೆಯಲ್ಲೂ ಸಹ ಹಿರಿಯವ ಐದು ವರ್ಷದ ಮುದ್ದಿನ ಕಂದ ನಗುತಲಿದ್ದ. ಆ ದಿನ ನಡೆದ ಕತ್ತಲಾಟದಲ್ಲಿ ನಾ ಸುಸ್ತಾಗಿದ್ದೆ"
ಅಪ್ಪನ ಬರಹವೇ ವಿಚಿತ್ರದ್ದು;
"ಸುಮಾರು ಆರು ತಿಂಗಳ ನಂತರ ನನ್ನ ಪುರ್ವಿಗಾಗಿ ಊರಿನ ಹಾದಿ ತುಳಿದೆ. ಆ ದಿನವೂ ಹುಣ್ಣಿಮೆ. ಆದರೆ ಹೊರಟದ್ದು ಬೆಳಗ್ಗೆ. ಊರಿಗೆ ಹೋಗಿ, ಅವಳ ಮನೆ ಎದುರು ಹರಿದಾಡಿದಾಗಲೂ ಅವಳು ಬಾರದಿದ್ದು ಕಂಡು ಭಯವಾಗುತ್ತಿತ್ತು ( ಹಿಂದೆಯೆಲ್ಲಾ ಅದು ಹೇಗೆ ಗುರುತಾಗಿ ಓಡಿ ಬಂದು ಬಾಗಿಲಲ್ಲಿ ನಿಂತು ನನ್ನ ನೋಡಿ ಮುಗುಳ್ನಗುತ್ತಿದ್ದಳು ) ಗೆಳೆಯ ಕುಂಡೆಯನ್ನು ವಿಚಾರಿಸಿದಾಗ " ಲೋ, ಆವಮ್ಮ ಹುಚ್ಚಿ ಆಗ್ಬಿಟ್ಟ್ ಳು. ಅದ್ಯಾವುದೋ ಸೀಮೆ ಪದ ಹೇಳ್ಕಂಡು ಊರೂರು ಅಲ್ಕೊಂಡು ಅದೆಲ್ಲೋ ಲಾರಿ ಕೆಳಗೆ ಸಿಕ್ಕೊಂಡ್ ಸತ್ತ್ ಹೋದ್ಲು ಕಣ್ಲಾ ಬಡ್ ಹೈದ್ ನೇ " ಎಂದ. ಅಲ್ಲಿಯೇ ತಲೆ ಸುತ್ತು ಬಂದು ಬಿದ್ದೆ"
" ಜಲಧಾರಿನಿಯಲ್ಲಿ ತೇಲುವ ಮೃತಎಲೆಗಳಲ್ಲಿ ಅವಳಿದ್ದಾಳಾ ಎಂದು ಹುಡುಕುತ್ತಿದ್ದೆ, ಸಿಗಲಿಲ್ಲ. ಈಚೀನ ದಿನಗಳು ಕಾಡಿನಂತೆ ಕತ್ತಲಾಗಿವೆ. ಉಲ್ಲಾಸವೇ ಇಲ್ಲ"
" ನನ್ನೊಳಗಿನ ದುಃಖ ಮಾದಿಗೆ ಹೇಗೋ ಗೊತ್ತಾಯ್ತು ( ನಿಜ ಕಾರಣ ತಿಳಿದಿಲ್ಲ ) . ಪರದೇಸಿನಾ ಬೇಗ ಮಲಗಿಸಿ ಬಲು ಸಿಂಗಾರವಾಗಿ ನನ್ನೆದುರು ಕುಳಿತಳು. ನನ್ನ ದುಃಖಕ್ಕೆ ಮದ್ದು ಅವಳಲ್ಲಿತ್ತು. ಆ ದಿನ ಅವಳು ಅದನ್ನು ಕೊಟ್ಟಳು ಸಹ; ವಿಚಿತ್ರವಾದರೂ ನಿಜವೇ. ಇಂತಹ ಮದ್ದುಗಳಲ್ಲಿ ನನ್ನ ನಾ ಕಳಕೊಂಡರೂ ಪೂರ್ವಿ ಕಳೆಯಲಿಲ್ಲ. ಅವಳು ಕಾಡಿನಂತೆ ದಟ್ಟವಾಗಿದ್ದಳು. ಅವಳ ನೆನಪಿಗೆ, ನೆನಪು ಕೊಟ್ಟ ನೋವುಗಳಿಗೆ, ನೋವುಗಳಿಗೆ ಕೊಟ್ಟ ಮಾದಿಯ ಮದ್ದುಗಳಿಗೆ ನನ್ನ ಎರಡನೆಯವ ಹುಟ್ಟಿದ. ಪೂರ್ವ ಎಂದು ಹೆಸರಿಟ್ಟೆ"
ಎರಡನೇ ಅಣ್ಣನ ಹಿಸ್ಟರಿಯಿದು.
ಅವನು ತುಂಬಾ ಭಾವುಕ. ಅಲ್ಲಿ ಅಣ್ಣನ( ಪರದೇಸಿಯ) ಮನೆಯಲ್ಲಿದ್ದಾಗ ಅದ್ಯಾವುದೋ ಸುಂದರ ಹುಡುಗಿಯ ನಗುವಿಗೆ ಅರಳಿದ್ದ. ಆದರೆ ಆ ನಗು ಕೊನೆವರೆಗೂ ಬರಲಿಲ್ಲ. ಇವರ ಆದರ್ಶವೆನ್ನಬಹುದಾದ ಆ ’ಪ್ರೇಮ’ಕ್ಕೆ ಆಕೆಯ ಮನೆಯವರೇ ಅಡ್ಡವಾದರು. ದೂರದ ಬಾಂದ್ರ( ಮುಂಬೈನಲ್ಲಿದೆ) ಕ್ಕೆ ಅವಳನ್ನು ಮದುವೆ ಮಾಡಿ ಕಳಿಸಿದರು. ತನ್ನ ದುಃಖ ಶಮನಕ್ಕಾಗಿ ಇಲ್ಲಿಗೆ ಬಂದ ಗಂಟೆಗಟ್ಟಲೇ ಅಮ್ಮನ ಮಡಿಲಲ್ಲಿ ಮಲಗುತ್ತಿದ್ದ. ವಿಚಿತ್ರವಾಗಿ ನಗುತ್ತಿದ್ದ, ಹಾಗೇ ಅಳುತ್ತಿದ್ದ. ಈಗ ವಿಚಿತ್ರವಾಗಿ ವಿರಹಗೀತೆಗಳನ್ನು ಹಾಡುತ್ತಾ ಕಾಡುಗಳಲ್ಲಿ ಅಲೆಯುತ್ತಿರುತ್ತಾನೆ. ಅದೋ ಅವನ ಧ್ವನಿ ಕೇಳುತ್ತಿದೆ " ಮರೆಯದಂತಾ ರೂಪರಾಶಿ, ಹೃದಯದಾಶ ರೂಪಸಿ" ಅಯ್ಯೋ ಅಳುತ್ತಿದ್ದಾನೆ, ಅರೇ ವಿಚಿತ್ರವಾಗಿ ನಗುತ್ತಿದ್ದಾನೆ. ಆ ನಗು ದ್ವನಿಯಾಗಿ, ಪ್ರತಿದ್ವನಿಯಾಗಿ, ದ್ವಿವೇಗವಾಗಿ ಕಾಡನ್ನೆಲ್ಲ ಹಬ್ಬಿದೆ; ಅಪ್ಪನ ಗೋರಿ ಸಣ್ಣಗೆ ನಡುಗುತ್ತಿರಬೇಕು. ನಾನು ಕುತೂಹಲದಲ್ಲಿ ನನ್ನ ಜನನದ ಬಗ್ಗೆ ಅಪ್ಪನ ಡೈರಿಯ ಪುಟಗಳನ್ನು ಹುಡುಕುತ್ತೇನೆ. ಉಹ್ಞೂ ಸಣ್ಣ ಪದವೂ ಇಲ್ಲ.
"ಇತ್ತೀಚೆಗೆ ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ ಅದೇ ’ಸಾವು’! ಮೊನ್ನೆ ಅದ್ಯಾವುದೋ ಸಭೆಯಲ್ಲಿ ಗುಂಗುರು ಕೂದಲಿನ ವಿಜ್ಞಾನಿಯೊಬ್ಬ " ಬೆಳಕಿನ ವೇಗದಲ್ಲಿ ನೀನಿರುವಾಗ ಶೂನ್ಯವಾದಂತೆ ಭಾಸವಾಗುತ್ತದೆ. ಅಸಲು ಶೂನ್ಯವೇ ಆಗಿರುತ್ತದೆ" ಎಂದು ವಿಜ್ಞಾನದ ತಿರುಳನ್ನು ಬಿಚ್ಚುತ್ತಿದ್ದ. ಅದಕ್ಕೆ ಪೂರಕವಾಗಿ ವೇದಗಳ ಶ್ಲೋಕಗಳನ್ನು ಬಳಸುತ್ತಿದ್ದ ( ಅದು ಬೆಂಗಳೂರಿನ ಹೆಸರು ಗೊತ್ತಿಲ್ಲದ ಪ್ರದೇಶ. ಮಕ್ಕಳ್ಳಿಬ್ಬರೂ ಹಿರಿಮಗನ ಮನೆಯಲ್ಲಿದ್ದಾರೆ. ಶ್ರೀಮಂತಿಕೆ ಮನೆಯಲ್ಲಿ ತುಂಬಿದೆ. ಎಕೋ ಶ್ರೀಮಂತಿಕೆ ಎಂದರೆ ನನಗೆ ಚಿಕ್ಕಂದಿನಿಂದ ಅಲರ್ಜಿ. ಹಾಗೇ ಸುತ್ತಾಡಲೂ ಹೊರಗೆ ಬಂದಾಗ ಆ ಸಭೆಯು ನಡೆಯುತ್ತಿತ್ತು). ಎರಡು ದಿವಸದಿಂದ ಅದೇ ವಾಕ್ಯ ರಿಂಗಣಿಸುತ್ತಿದೆ. ಹಾಗೇ ರಿಂಗಣಿಸುತ್ತಲೇ ಅದು ಸಾವಿನ ನಿಜವಾದ ಅರ್ಥ ಸ್ಫ಼ುರಿಸಿತು. ನಾನೀಗ ಬೆಳಕಿನ ವೇಗಕ್ಕೆ ಮರಳಬೇಕು; ಅಲ್ಲ ಬೆಳಕಿನ ವೇಗದಲ್ಲಿ ನಡೆಯಬೇಕು"
" ಬದುಕು ಪ್ರಶ್ನೆಗಳ ಹುತ್ತ,
ಬರಿದೇ ನೂರು ಉತ್ತರಗಳ ಸುತ್ತ,
ನಿಜ ಉತ್ತರವರಿತವನು ಸತ್ತ,
ಪ್ರಶ್ನೆಗಳೊಡನೆ ತಲೆಮಿಂದವನಾದನು ಹುತ್ತ"
ಅಪ್ಪನ ಡೈರಿಯ ಸಾಲುಗಳಿವು, ಹಾಗೆ ಬರೆದ ಎಷ್ಟು ದಿನಕ್ಕೆ ಅಪ್ಪ ಸತ್ತನೆಂಬುದು ಗೊತ್ತಿಲ್ಲ. ಏಕೆಂದರೆ ಅವನ ಡೈರಿಗೆ ಪುಟಗಳ ಸಂಖ್ಯೆಯಾಗಲೀ, ದಿನಾಂಕವಾಗಲೀ ಇಲ್ಲ,.
ಬೆಂಗಳೂರು; ನನ್ನ ಇಲ್ಲಿನ್ ಕರಿಮುಗಿಲಕಾಡಿನಿಂದ ನೋಡಿದರೆ ಬಲು ತಮಾಷೆಯೆನಿಸುತ್ತದೆ. ಅಲ್ಲಿನ ಜನ, ನೋವು, ಆಡಂಬರ, ಅರ್ಥವಿಲ್ಲದ ಥಿಯರಿಗಳು ಕಾರ್ಟೂನ್ ಗಳೇ ಸರಿ. ಮನುಷ್ಯ ತನ್ನದೆನಬಹುದಾದ ಎಲ್ಲ ಪೊರೆ ಕಳಚಿ ದೂರದಿಂದ ಅವನನ್ನು ಅವನೇ ನೋಡಿಕೊಳ್ಳಬೇಕು. ಆಗ ಅವನಿಗವನು ಅರಿವಾಗುತ್ತಾನೆ.
ಅಮ್ಮ ಆಕೆಯ ರೋಗಕ್ಕೆ ಅದ್ಯಾವುದೋ ಹೆಸರಿಲ್ಲದ ಎಲೆಯ ರಸ ಕುಡಿಯುತ್ತಾಳೆ. ರಾತ್ರಿಯೆಲ್ಲಾ ಕೆಮ್ಮುತ್ತಾಳೆ. ನೆನ್ನೆ ಜಲಧಾರಿನಿಯಿಂದ ಮನೆಗೆ ಬಂದಾಗ ಅಮ್ಮ ನರಿಯೊಂದಿಗೆ ಮಾತನಾಡುತ್ತಿದ್ದಳು. ನಾನು ಬಂದೊಡನೆ ನರಿ ವಿಚಿತ್ರವಾಗಿ ಊಳಿಡುತ್ತಾ ಓಡಿ ಹೋಯ್ತು. ಅಮ್ಮ ಏನೂ ಆಗದವಳಂತೆ ಅಡುಗೆ ಮನೆ ಹೊಕ್ಕಳು. ಅಡುಗೆ ಮಾಡಲು( ರಸ ಮಾಡಲೂ ಸಹ)
ಅಮಾವಾಸ್ಯೆಗೆ ಬೇಗನೇ ಕತ್ತಲಾಗುತ್ತಿದೆ. ಕಾಡಿನಂತ ಕಾಡೇ ವಿಚಿತ್ರವಾಗಿ ಕತ್ತಲೆಡೆಗೆ ಸಾಗುತ್ತಿದೆ. ಜಲಧಾರಿನಿಯ ಮೃತ ಎಲೆಗಳ ರವ ಇಲ್ಲಿಗೂ ಕೇಳಿಸುತ್ತಿದೆ. ಸಾಧ್ಯವಾದರೆ ನಿಮ್ಮ ದೈನಂದಿನ ಜಂಜಡದಿಂದ, ಭಾರವಾದ ಥಿಯರಿಗಳಿಂದ, ಅರ್ಥವಿಲ್ಲದೇ ಅಲೆದಾಡುತಿಹ ನಿಮ್ಮ ಸೋಗಿನಿಂದ ನಿಮಗೊಂದು ಸಣ್ಣನೆಯ ವಿಶ್ರಾಂತಿ ಬೇಕಿದ್ದರೆ. ನನ್ನ ಕರಿಮುಗಿಲಕಾಡಿಗೆ ಬನ್ನಿ. ಅಲ್ಲಿ ಬಂದರೆ ಎಷ್ಟೋ ವಿಚಿತ್ರ ಸದ್ದುಗಳು ಕೇಳಿಸುತ್ತವೆ. ಅಂತಹುದೇ ಒಂದು ಸದ್ದು ಈ ಜಲಧಾರಿನಿಯದು. ಅಲ್ಲಿ ಪಕ್ಕದ ಬಂಡೆಯನ್ನೇರಿ ಕಾಡನ್ನು ಸವಿಯುತ್ತಿರುತ್ತೇನೆ. ನಿಮಗೆ ನನ್ನ ಗುರುತಾದೀತು. ಕತ್ತಲಾದರೆ ನರಿಯನ್ನು ಮೀರಿಸೋ, ಅಮ್ಮನೂ ಊಳಿಡುವುದು ಕೇಳಿಸುತ್ತದೆ. ಹೆದರಬೇಡಿ ಬನ್ನಿ. ಆಕೆ ನಿಜಕ್ಕೂ ದೇವರಿನಂತಹವಳು. ಅವಳ ತೆಕ್ಕೆಯಲ್ಲಿ ನಾನು ಮಲಗಿರುತ್ತೇನೆ. ಬರುತ್ತೀರಲ್ಲವೇ?
*************************ಅಂತ್ಯ**********************************
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ