ಕ್ಲಬ್ ಹೌಸ್ ಎಂಬ ದಿನವೂ ನಡೆವ ಸಾಹಿತ್ಯ ಜಾತ್ರೆ

 ಕರೋನ ಲಾಕ್ ಡೌನ್ ಟೈಮಲ್ಲಿ  ಕ್ಲಬ್  ಹೌಸ್ ಹುಚ್ಚು ಹಿಡಿದ  ಅಲ್ಲೊಂದು ಇಲ್ಲೊಂದು ಕಡೆ ಫೇಸ್ ಬುಕ್ಕಲ್ಲಿ ಇದು ನನ್ನ ಕ್ಲಬ್ ಹೌಸ್ ಐಡಿ ಫಾಲೋ ಮಾಡಿ ಎಂಬ ಪಬ್ಲಿಸಿಟಿ ನಡೆವಾಗ ನಾನು ಕೂಡ ಜಿಗಿದಿದ್ದೆ, ಇವಾಗ ನೀವು ಕ್ಲಬ್ ಹೌಸ್ ಇನ್ಸ್ಟಾಲ್ ಮಾಡಿಕೊಂಡರೆ ಸಾಕು ಸೀದಾ ಒಳಹೋಗಬಹುದು ಆಗ ಹಾಗಿರಲಿಲ್ಲ ನಿಮಗೆ ಪರಿಚಯದವರೊಬ್ಬರು ಅಲ್ಲಿದ್ದು ಅವರು ನಾಮಿನೇಟ್ ಮಾಡಿದರೆ ಮಾತ್ರ , ಅಲ್ಲಿವರೆಗೂ ಕಾಯುತ್ತಾ ಕೂರಬೇಕಿತ್ತು. ನನ್ನನ್ನು ನಾಮಿನೇಟ್ ಮಾಡಿದ ಪುಣ್ಯ ನವೀನ್ ತೇಜಸ್ವಿಗೆ ಸಲ್ಲಬೇಕು,ನನ್ನ ಮೊದಲ ದಿನ ಅಲ್ಲಿ ಇಲ್ಲಿ ರೂಮ್ ಹೊಕ್ಕಿ ಹೇಗೆ ಬಳಸುವುದು ಗೊತ್ತಾಗದೆ ಹೊರಬಂದು ಆಮೇಲೆ ಯೂ ಟೂಬ್ ಲಿ ಕ್ಲಬ್ ಹೌಸ್ ಬಳಕೆ ಬಗ್ಗೆ ವಿಡಿಯೋ ನೋಡಿ ಕಲಿತದ್ದು ಆಯ್ತು, ಆದರೆ ಕನ್ನಡದ ಕ್ಲಬ್ ಹೌಸ್ ಪೂರ್ತಿ ಬರೀ ಸಿನಿಮಾದ್ದೇ ಸಿನಿಮಾದವರದ್ದೆ ಹಾವಳಿ, ಮತ್ತೆ ಅದೇ ಅದೇ ಪ್ರಶ್ನೆಗಳು ಅದೇ ಅದೇ ಉತ್ತರಗಳು ಆ ಉತ್ತರ ಕೊಡುವವವ್ರು ಸಹ ಅವರೇ , ಅದು ಬಿಟ್ಟರೆ ಡಿ ಪಿ ನೋಡಿ ಪ್ರಪೋಸ್ ಮಾಡಿ ಎಂಬ ರೂಮುಗಳು. ಒಂದು ರೂಮಲ್ಲಿ ಪವನ್ ಕುಮಾರ್ ಶ್ರುತಿ ಹರಿರಹನ್ ಮಾನ್ವಿತ ಮತ್ತು ದೊಡ್ಡ ದೊಡ್ಡವರೆಲ್ಲ ಸೇರಿ ಒಂದು ರೂಮು ಮಾಡಿ ಅಲ್ಲಿಂದಲೇ ಫಂಡ್ ಎತ್ತುವ ರೂಮು ನೋಡಿದಾಗ ಹೀಗೂ ಉಂಟೇ ? ಎಂದು ಬಾಯಿ ಬಿಡುತ್ತಿದ್ದೆ ಅಲ್ಲಿ ಬಂದವರೆಲ್ಲ ಅದೆಂತದೋ ಪ್ಲಡ್ಜ್ ಇಡುತ್ತಿದ್ದರು ಇಪ್ಪತ್ ಸಾವಿರ ಇಂದ ಹಿಡಿದು ಲಕ್ಷ ಲಕ್ಷ ಪ್ಲಡ್ಜ್ , ಓ ಮೈ ಗಾಡ್, ಬರೋಬ್ಬರಿ ಕೋಟಿ ದುಡ್ಡು ಬಂತು ಅಂದುಕೊಂಡೆ ಪವನ್ ಕುಮಾರ್ ಗೆ, ಆಮೇಲೆ ಅದೇನಾಯ್ತೋ ಗೊತ್ತಿಲ್ಲ.

ಡಿಪಿ ನೋಡಿ ಪ್ರಪೋಸ್ ಮಾಡಿ ಎಂಬ ಟಾಪಿಕ್ ನೋಡಿ ಕ್ಲಬ್ ಹೌಸ್ ಗೆ ಸಲಾಮು ಹೊಡೆಯೋ ಟೈಮಲ್ಲಿ ಜಿ ಎನ್ ಮೋಹನ್ ಅವರ ಬಹುರೂಪಿ ಕ್ಲಬ್ ರೂಮಲ್ಲಿ ಗೆಳತಿ ವಿನುತ ವಿಶ್ವನಾಥ್ ಅವರ ಪುಸ್ತಕದ ಚರ್ಚೆ ಸಂವಾದ ಇತ್ತು, ನಾನು ಗ್ಯಾಪಲ್ಲಿ ಕೈ ಎತ್ತಿ ಪ್ರಶ್ನೆ ಕೇಳೋಣ ಅಂದುಕೊಂಡೆ,ನಾನು ಕೈ ಎತ್ತಿದ್ದೆ ತಡ ಮೋಹನ್ ಸರ್ ಕೈ ಹಿಡಿದು ಎಳ್ಕೊಂಡರು ನಾನು ಅದೆಂತದೋ ಡುಬಕ್ ಪ್ರಶ್ನೆ ಕೂಡ ಕೇಳಿದೆ ಆದರೆ ಪ್ರಶ್ನೆ ಕೇಳುವಾಗ ನನ್ನ ಧ್ವನಿ ನಡುಗುತ್ತಿತ್ತು, ಕಾಲು ಅಬ್ದುಲ್ ಶೇಕ್ ಶೇಕ್, ಹೆಂಡ್ತಿ ಬೇರೆ ಯಾಕ್ಲ ನಡುಗ್ತಾ ಇದ್ಯಾ ಅಂತ ರ್ಯಾಗ್ , ಅರೆ ಅಲ್ಲಿ ಇರುವವರೆಲ್ಲ ಪರಿಚಯದವರೇ, ಜೊತೆಗೆ ಅವರ ಡಿಪಿ ಬಿಟ್ರೆ ಬೇರೇನೂ ಕಾಣಿಸೋಲ್ಲ, ಆದರೂ ಯಾಕೆ ಇಷ್ಟು ನಡುಕ, ನನ್ನ ಸ್ಟೇಜ್ ಫಿಯರ್ ಸ್ಟೇಜ್ ಲೆಸ್ ಕ್ಲಬ್ ಹೌಸಲ್ಲಿ ಕಪಾಳಕ್ಕೆ ಹೊಡೆದಂತಾಯ್ತು, ಅದೆಂತದೋ ಅವಮಾನ ತಳಮಳ, ಅವತ್ತು ರಾತ್ರಿ ನಿದ್ದೆಯಿಲ್ಲ, ಆಗಲೇ ಡಿಸೈಡ್ ಮಾಡಿದ್ದು ನನ್ನದೇ ಒಂದು ಅಡ್ಡ ಶುರು ಮಾಡಿ ನನ್ನದೇ ಡುಬಕ್ ಟಾಪಿಕ್ ಮಾಡುವ ಅಂತ ಅವತ್ತೇ ಮಧ್ಯ ರಾತ್ರಿ ಹನ್ನೆರಡು ಇಪ್ಪತ್ತಕ್ಕೆ ಅಡಕಸಬಿ ಅಡ್ಡ ಶುರು ಮಾಡಿದೆ , ಇವತ್ತಿಗೆ ಎರಡು ತಿಂಗಳು ಮೂರು ದಿನ

ಕ್ಲಬ್ ಹೌಸಲ್ಲಿ ಒಮ್ಮೆ ಇಂಗ್ಲೀಷ್ ಸಾಹಿತ್ಯ ಓದುವ ರೂಮು ಹೊಕ್ಕೆ ಅದು ಚಿಕ್ಕ ರೂಮು ಆರು ಜನ, ಒಂದು ಗಂಟೆಯ ಕಾರ್ಯಕ್ರಮ, ಇಷ್ಟವಾಗಿ ಎರಡು ಮೂರು ದಿನ ಹೋಗಿ ಮೂರ್ಕಾಮಿ ಸತ್ಯಜಿತ್ ರೇ ಓಶೋ ಓದಿದ್ದು ಆಯ್ತು, ಸಡನ್ನಾಗಿ ಅರೆ ಕನ್ನಡ ಸಾಹಿತ್ಯ ಇಷ್ಟು ಸಮೃದ್ದಿಯಾಗಿರುವಾಗ ನಾನು ಯಾಕೆ ಅಲ್ಲಿ ಇಂಗ್ಲೀಷ್ ಓದುವೆ ಎಂದು ನಮ್ಮ ಅಡ್ಡದಲ್ಲಿ ಓದು ಜನಮೇಜಯ ಶುರುಮಾಡಿದ್ವಿ, ಒಂದೈದು ಜನ ಬಂದ್ರೆ ಸಾಕು ಅರ್ಧ ಗಂಟೆ ಮಾಡೋಣ ಎಂದು ಶುರು ಮಾಡಿದ್ದು, ಆದರೆ ಮೊದಲ ವಾರದಲ್ಲೇ ೩೦-೪೦ ಜನ ಬರ್ತಾ ಬರ್ತಾ ಅರ್ಧಗಂಟೆ ಸಾಲದೆ ಒಂದು ಗಂಟೆ ಆಯ್ತು ಒಂದು ಗಂಟೆ ಒಂದೂವರೆ ಆಯ್ತು ಒಂದೂವರೆಯಿಂದ ಎರಡು ಗಂಟೆ ಆಯ್ತು ಸದ್ಯ ಬೆಳಗ್ಗೆ ೭:೩೦ ರಿಂದ ೯:೩೦ ರವರೆಗೂ ನಡೆಯುತ್ತಿದೆ, ಕುವೆಂಪು ಕಾರಂತ ತೇಜಸ್ವಿ ಜೊತೆಗೆ ಈಗಿನ ಕಾಲದ ಬರಹಗಾರು ಕೂಡ ಬಂದಿದ್ದಾರೆ, ಸ್ವರಚಿತ ಕವಿತೆ ಕಥೆ ಕೂಡ ವಾಚಿಸಿದ್ದಾರೆ


ಕ್ಲಬ್ ಹೌಸ್ ನ ದೊಡ್ಡ ಲಾಭವೆಂದರೆ ಅದರಲ್ಲಿ ದಿನ ನಿತ್ಯ ನಡೆವ ಸಾಹಿತ್ಯ ಜಾತ್ರೆ, ಪ್ರತಿ ಬೆಳಗ್ಗೆ ನಮ್ಮ ಅಡ್ಡದಲ್ಲಿ ಎರಡು ಗಂಟೆ ನಡೆದರೆ , ನಮ್ಮ ಕಾರ್ಯಕ್ರಮದ ಮುಂದಿನ ಭಾಗದಂತೆ ಕನ್ನಡದ ಮನಸುಗಳಲ್ಲಿ ಈ ಹೊತ್ತಿನ ಓದು ನಡೆಯುತ್ತೆ , ನವೀನ್ ಚಂದ್ರ ಚೆಂದವಾಗಿ ನಡೆಸಿಕೊಡುತ್ತಾರೆ,ಪ್ರತಿ ಸಂಜೆ ೬:೦೦ ಕ್ಕೆ ಕನ್ನಡ ಹಣತೆ ಎನ್ನುವ ಕ್ಲಬ್ ರೂಮಲ್ಲಿ ಪ್ರತಿ ದಿನ ಕನ್ನಡದ ಒಂದು ಸಣ್ಣ ಕತೆ ತೆಗೆದುಕೊಂಡು, ಅದನ್ನು ಅಧ್ಬುತವಾಗಿ ಓದಿ, ಕವಿ ಪರಿಚಯ ಕೂಡ ಮಾಡುತ್ತಾರೆ ಭರತ್ ಮತ್ತು ಅವರ ತಂಡ ಇದನ್ನು ಮಾಡುತ್ತಿದೆ, ಗಾಂಧಿ ಜಯಂತಿ ದಿನ ಬೊಳೆವಾರು ಬರೆದ ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ ಕೂಡ ಒದಲಾಯ್ತು, ಹಾಗೆ ಶ್ರಾವ್ಯ ಸಾಗರ್ ಎನ್ನುವ ಹುಡುಗಿ ವಿದ್ಯಾರ್ಥಿ ತನ್ನ ಸ್ನೇಹಿತರ ಬಳಗ ಕಟ್ಟಿಕೊಂಡು ಪ್ರತಿ ರಾತ್ರಿ ಯಾವುದಾದ್ರೂ ಕಾದಂಬರಿಯನ್ನ ಭಾಗ ಭಾಗವಾಗಿ ವಿಂಗಡಿಸಿ ಓದುವರು ಓದುವರೆಲ್ಲ ವಿದ್ಯಾರ್ಥಿ ಜೊತೆಗೆ ರಂಗಭೂಮಿ ಅವರಾದ್ದರಿಂದ ಕೇಳಿಸಿಕೊಳ್ಳಲು ಸಕತ್ ಖುಷಿ, ಇಷ್ಟು ಅಲ್ಲದೆ ಮಹಾಭಾರತ ಮಂಕುತಿಮ್ಮನ ಕಗ್ಗ ರಾಮಾಯಾಣ ಭಾಗವತ ಹೀಗೆ ಸಮಾನ ಆಸಕ್ತರು ಸೇರಿ ಅಲ್ಲಲ್ಲಿ ನಡೆಸುತ್ತಾರೆ, ಇನ್ನೂ ಒಂದು ಗುಂಪು ನೀವು ಯಾವ ಪುಸ್ತಕ ಓದುತ್ತಿದ್ದೀರಿ ಎಂದು ಯಾಕೆ ಇಷ್ಟವಾಯ್ತು ಎಂದು ಕೂಡ ಕೇಳುವ ಒಳ್ಳೆಯ ಕಾರ್ಯಕ್ರಮ ಮಾಡುತ್ತಾರೆ. ಎಷ್ಟೋ ಕ್ಲಬ್ ರೂಮುಗಳಲ್ಲಿ ಓದುಗರ ಜತೆ ಅದೇ ಬರಹ ಬರೆದ ಬರಹಗಾರರು ಸೇರಿ ಸಂವಾದ ಚರ್ಚೆ ಮಾತುಕತೆ ಕೂಡ ಆಗುತ್ತದೆ 

ನಮ್ಮ ಕಾರ್ಯಕ್ರಮಕ್ಕೆ ಬಂದ ಒಬ್ಬರು ಹೇಳಿದ್ದು ಇದು ನಮ್ಮ ದಿನ ಶುರುವಾಗೋದೆ ಓದು ಜನಮೇಜಯ ಜೊತೆಗೆ, ತಿಂಡಿ ಮಾಡುತ್ತಾ ನಾಸ್ತ ಮಾಡುತ್ತಾ ಕೇಳಿಸಿಕೊಳ್ಳುತ್ತೇವೆ, ಇನ್ನೊಂದು ದಿನ ಒಬ್ಬ ಅಂಧ ಮಹಿಳೆ ತಾನು ಕನ್ನಡ ಬಿ ಎ ಸಾಹಿತ್ಯ ಓದುತ್ತಿರುವಾಗಿ ನಮ್ಮ ಕಾರ್ಯಕ್ರಮದಿಂದ ಎಷ್ಟೆಲ್ಲ ಓದು ಆಗುತ್ತಿದೆ ಎಂದರು, ಕೆಲವರು ಓದಲು ಶುರು ಮಾಡಿದರೆ, ಮೊದಲಿನಿಂದ ಓದುವವರು ಮತ್ತಷ್ಟು ಪುಸ್ತಕ ಕೊಂಡುಕೊಳ್ಳುತ್ತಿರುವುದು ಖುಷಿಯ ವಿಚಾರ, ನಮ್ಮ ಓದುಗರಿಗೆ ಋತುಮಾನ ಆಪ್ ವಿಶೇಷ ರಿಯಾಯಿತಿ ಕೂಡ ಕೊಟ್ಟರೆ, ಜಿ ಎನ್ ಮೋಹನ್ ರ್ ಬಹುರೂಪಿ ಬುಕ್ ಹಬ್ ನಮ್ಮಲ್ಲಿ ಬಂದು ಓದುವ ಬರಹಗಾರರನ್ನು ಪ್ರೋತ್ಸಾಹಿಸಲು ಅವರು ಬರೆದ ಲಭ್ಯವಿರುವ ಕೃತಿಗಳಿಗೆ ಮಾರಲು ಜಾಗ ನೀಡಿದೆ. ಕೆಲವರಂತೂ ಬೆಳಗ್ಗೆ ನಮ್ಮಲ್ಲಿ ಓದಿ ಆಮೇಲೆ ಬೇರೆ ಬೇರೆ ಕಡೆ ಹೋಗಿ ಓದುವರು, ಅಡಕಸಬಿ ಅಡ್ಡಾದಿಂದ ಓದುವುದು ಹೆಚ್ಚಾಗಿದೆ ಎಂದಾಗ ಹೆಮ್ಮೆ ಖುಷಿ ಕೂಡ.

ಹೀಗೆ ಕ್ಲಬ್ ಹೌಸಲ್ಲಿ ಲೆಫ್ಟು ರೈಟು ತಮ್ಮ ವಿಷ ಕಾರುವ ವೇದಿಕೆ ಮಾಡಿಕೊಂಡಿರುವಾಗ ನಮ್ಮ ಕಾರ್ಯಕ್ರಮದಿಂದ ಓದುವಿಕೆ ಹೆಚ್ಚಾಗಿರುವುದು ಮತ್ತೆ ಎಷ್ಟೋ ಸಾಹಿತ್ಯಾಸಕ್ತರು ಪ್ರತಿ ನಿತ್ಯ ತಮ್ಮ ಒಂದು ಗಂಟೆ ಎತ್ತಿಟ್ಟು ಕನ್ನಡ ಓದುತ್ತಾ ಹಾಡುತ್ತಾ ಕನ್ನಡ ಸಾಹಿತ್ಯ ಬೆಳೆಸುತ್ತಿರುವುದು ದಿನ ನಿತ್ಯ ನಡೆಯುವ ಸಾಹಿತ್ಯ ಜಾತ್ರೆಯಂತೂ ಸುಳ್ಳಲ್ಲ.

ನಿಮಗೂ ಸಮಯ ಸಿಕ್ಕರೆ, ಬನ್ನಿ ಕನ್ನಡ ಓದುವ , ಸಾಹಿತ್ಯ ಜಾತ್ರೆಯಲ್ಲಿ ಪಾಲ್ಗೊಳ್ಳುವ .

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು