ನಿರುದ್ದೇಶ ತಿಕ್ಕಲಿನ ಹುಡುಕಾಟದಲ್ಲಿ...



ಹಾಗೆ ನೋಡಿದರೆ ಮಾನವ ಜನುಮ ಬಲು ದೊಡ್ಡದು ಎಂದು ಯಾವ ರೀತಿಯಿಂದ ಹೇಳಿದರೋ ಗೊತ್ತಿಲ್ಲ. ಮರುಕ್ಷಣವೇ ಇಲ್ಲವಾಗುವ ಬದುಕನ್ನು ಜನುಮಗಳಿಗೆ ಹೋಲಿಸಿಕೊಂಡು ಬಲು ದೊಡ್ಡದು ಎನ್ನುವುದು, ನಮ್ಮೆಲ್ಲ ಹುಟ್ಟಿನ ಹಿಂದೆ ಒಂದು ದೊಡ್ಡ ಉದ್ದೇಶವಿದೆಯೆಂದು ಹೇಳಲಾದೀತೆ? ನಮ್ಮೆಲ್ಲ ಭಾವ ,ಕ್ರಿಯೆಯನ್ನು ನಂಬಿಕೆಯೊಂದೇ ಪೋಷಿಸುತ್ತಾ ಬಂದಿರುವುದು. ಹಾಗಾಗಿ ಮಾನವ ಜನುಮ ಬಲು ದೊಡ್ಡದು ಎಂದು ನಂಬಿದರೆ ಸತ್ಯ ಇಲ್ಲವಾದಲ್ಲಿ ಸುಳ್ಳು.

ಇಂತಹುದೊಂದು ಆಲೋಚನೆ ಎದ್ದಿದು ಆಸ್ಪತ್ರೆಯ ಕಮಟು ವಾಸನೆಯಲ್ಲಿ ಅರವತ್ತು ವರ್ಷವಾದರೂ ಎಂತಾ ಹುಡುಗಿಯನ್ನು ನಾಚಿಸುವಷ್ಟು ಕೆಲಸ ಮಾಡುತ್ತಾ ಓಡಾಡುತ್ತಾ ಇದ್ಡ ಅಮ್ಮನಿಗೆ ಪಿತ್ತಕೋಶದಲ್ಲಿ ಅದೆಂತಹುದೋ ಕಲ್ಲಿವೆ ಆಪರೇಷನ್ ಮಾಡಬೇಕು ಎಂದಾಗ ಅದೊಂದು ಅಂತಾ ದೊಡ್ಡ ಖಾಯಿಲೆ ಅನಿಸಲಿಲ್ಲ ಅದೇ ಪಿತ್ತಕೋಶವನ್ನು ಕತ್ತರಿಸಿ ಇದೇ ನೋಡಿ ನಿಮ್ಮ ಅಮ್ಮನ ಪಿತ್ತಕೋಶ ಎಂದು ತೋರಿಸಿದಾಗ ಮೂರ್ಛೆ ಬಿದ್ದಿದ್ದೆ. ಅದೇ ಪಿತ್ತಕೋಶ ಪರೀಕ್ಷೆಗೆ ಕಳಿಸಿ ಅದರ ವರದಿ ಬಂದಾಗ ಅದೊಂದು ದೊಡ್ಡ ಶಾಕ್ GLADBLADDER CANCER T3 STAGE ಅದೊಂದು ಅಪರೂಪದ ಕ್ಯಾನ್ಸರ್ ಅದರ ಲಕ್ಷಣಗಳು ಮಾಮೂಲಿ ಕ್ಯಾನ್ಸರ್‌ನ ಹಾಗೇ ಮೊದಲೇ ಕಾಣಿಸಿಕೊಳ್ಳುವುದಿಲ್ಲ ಹೀಗೆ ಯಾವುದಾದರೂ ಆಪರೇಷನ್ ಮಾಡಿದರೆ ಅದರ ವರದಿಯಲ್ಲಿ ಬಂದಿರುತ್ತದೆ. ಇದೊಂದು ವಿಷಾದಕರ BUY ONE GET ONE FREE OFFER. ಕಿಮೋತೇರಪಿಯಿಂದಲು ಇದು ಗುಣವಾಗುತ್ತೆ ಅಂತಾ ಹೇಳಲಾಗದು ಎಂದು ಡಾಕ್ಟರ್ ಹೇಳುತ್ತಿದ್ದರೆ ಮನದಲ್ಲಿ ಸ್ಮಶಾನ ಮೌನ ಆ ಕ್ಷಣಕ್ಕೆ ಮಾನವ ಜನುಮ ಬಲು ಚಿಕ್ಕದು

ಇಂತಹುದೊಂದು ಸಂದಿಗ್ದ ಸ್ಥಿತಿ ಮಾನವನನ್ನು ಬಿಟ್ಟರೆ ಬೇರಾವ ಪ್ರಾಣಿಗಳನ್ನು ಕಾಡುವುದಿಲ್ಲ. ನಾಯಿ ತನ್ನ ಸತ್ತ ಮರಿಯನ್ನು ಸಹ ಒಮ್ಮೆ ಮೂಸಿ ಕೊನೆಯ ವಿದಾಯದಂತೆ ಬಾಲ ಅಲ್ಲಾಡಿಸಿಕೊಂಡು ಸಿಕ್ಕ ಮರಕ್ಕೋ ಗಾಡಿಗೊ ಒಮ್ಮೆ ಕಾಲೆತ್ತಿ ಉಚ್ಚೆ ಉಯ್ದು ತಂಗಳನ್ನು ಹುಡುಕಿ ಹೋಗಿಬಿಡುತ್ತೆ ಅದಕ್ಕೆ ಮೋಹವಿಲ್ಲ ಕಣ್ಣೀರಿಲ್ಲ ತಲ್ಲಣವಿಲ್ಲ ಹೆಚ್ಚಾಗಿ ದುಃಖವಿಲ್ಲ. ಅದಕ್ಕೂ ಮಿಗಿಲಾಗಿ ನಾಳೆಯ ಒಂಟಿತನದ ಭಯವಿಲ್ಲ. ಆದರೆ ಒಂದು ಸಾವು ಮಾನವನನ್ನು ತೀರಾ ಒಂಟಿಯಾಗಿಸಿಬಿಡುತ್ತೆ.

ನಮ್ಮ ಜೊತೆಯಲ್ಲೇ ಸುಮಾರು ವರ್ಷಗಳಿಂದ ಓಡಾಡುತ್ತಾ ತೀರಾ ಆಪ್ತವಾಗಿದ್ದ ಗೆಳೆಯನೊಬ್ಬ ಒಂದು ಮುಂಜಾವಲ್ಲಿ ಒಬ್ಬಳ ಮೋಹಕ್ಕೆ ಬಿದ್ದು ಮರೆತೆಬಿಡುತ್ತಾನೆ. ಆ ಕ್ಷಣ ತೀರಾ ಕಾಡುವ ಕೆಣಕುವ ಬಯ್ಯುವ ಅಸೂಯೆ ಪಡುವ ದ್ವೇಷಿಸುವ ಎಷ್ಟೋ ಭಾವಗಳು ಬಂದುಬಿಡುತ್ತವೆ ಇನ್ನೂ ಅವನು ಬಿದ್ದ ಮೋಹ ಇವನ ಮೋಹವಾಗಿದ್ದರೆ ಮುಗಿಯಿತು ಅದೊಂದು ಶೀತಲ ಸಮರ. ಇವೆಕ್ಕೆಲ್ಲಾ ಕಾರಣ ಅದೇ ನಂಬಿಕೆ .ಅವನೆಂದೂ ಇವರ ಹತ್ತಿರ ನಾನು ಯಾವ ಹುಡುಗಿಯ ಸಂಗವು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವುದಿಲ್ಲ,ಹಾಗೆ ನಂಬಿರುತ್ತಾರೆ ಹಾಗಾಗಿ ಅವನ ಮಾಮೂಲಿ ಬದಲಾವಣೆ ಕೂಡ ಒಂದಷ್ಟು ದುಃಖ ನೋವು ಪಾಠಗಳನ್ನು ಕಲಿಸಿ ಹೋಗುತ್ತದೆ. ಇನ್ನೂ ಅವನೆಲ್ಲ ಮರೆತು ಮೊದಲ ಹಾಗೆ ಇರುವುದಕ್ಕೆ ಅಹಂ ಹುಸಿ ಆದರ್ಶಗಳು ಅಡ್ಡಬರುತ್ತೆ. ಅದಕ್ಕೆ ಕ್ಷಮಿಸೋ ವ್ಯಕ್ತಿ ಎಲ್ಲರಿಗಿಂತಾ ದೊಡ್ಡವನಾಗಿಬಿಡುತ್ತಾನೆ.

ಮನುಷ್ಯ ಬಿಟ್ಟರೆ ಯಾವ ಪ್ರಾಣಿಗಳಿಗೂ ಇಂತಹ ಸ್ನೇಹ ಬಾಂಧವ್ಯವಿರುವಿದಿಲ್ಲ ಎಷ್ಟೇ ಜೊತೆಯಾಗಿದ್ದರು ಆಹಾರಕ್ಕಾಗಿ ಕಿತ್ತಾಡುತ್ತವೆ. ಬೆದೆಗೆ ಬಂದಾಗ ಕಿತ್ತಾಡಿಕೊಂಡೇ ಮಿಲನ ಮಾಡುತ್ತವೆ ಹೊರತು ಅದೇ ದ್ವೇಷದಲ್ಲಿ ಮುಳುಗುತ್ತ ಬದುಕುವುದಿಲ್ಲ ಹಾಗೆ ನೋಡಿದರೆ ಪಾವಿತ್ರ್ಯ ಎನ್ನುವುದು ಮನುಷ್ಯನನ್ನು ಅಷ್ಟೇ ಬಾಧಿಸುವುದು. ಹಾಗಾಗಿ ಪಾವಿತ್ರ್ಯ ಒಂದು ವ್ಯಸನ ಎನ್ನುವುದು ತಪ್ಪಲ್ಲ. ಪಾವಿತ್ರ್ಯವವನ್ನು ಬಯಸುವುದು ಒಂದು ತೆರನ ಬಲಾತ್ಕಾರ.

ಮೊನ್ನೆ ಜಿಯಾಗ್ರಫಿ ಚಾನೆಲಿನಲ್ಲಿ ಅದ್ಯಾವುದೋ ಇಲಿಯ ಬಗ್ಗೆ ತೋರಿಸಿದರಂತೆ ನನ್ನ ಸ್ನೇಹಿತ ಹೇಳಿದ ಆ ಇಲಿ ಒಂದಷ್ಟು ವರ್ಷ ಎಲ್ಲ ಇಲಿಗಳಂತೆ ಬೆಳೆಯುತ್ತದೆ ಒಂದು ಹಂತಕ್ಕೆ ಬಂದಾಗ ಸಿಕ್ಕ ಸಿಕ್ಕ ಹೆಣ್ಣು ಇಲಿಗಳನ್ನು ಹುಡುಕಿಕೊಂಡು ಬಲವಂತದಿ ಕೂಡುತ್ತದೆಯಂತೆ ಈ ಕೂಡುವ ಯುದ್ದದಲ್ಲಿ ತನ್ನ ಆಹಾರವನ್ನೇ ಮರೆತುಬಿಡುತ್ತದೆಯಂತೆ. ಹೀಗೆ ಕೂಡುತ್ತಾ ಕೂಡುತ್ತಲೆ ಸಾವನ್ನಪ್ಪುತ್ತದ್ದಂತೆ. ಆ ಇಲಿಗೆ ಏಡ್ಸ್ ಆಗಲಿ ಅದರ ಸಹಚರ ಇಲಿಗಳಿಗೆ ದ್ವೇಷ ಅಸೂಯೆ ಆಗಲಿ ಕಾಡುವುದಿಲ್ಲ. 




ಯಾವ ಕಾಡುಪ್ರಾಣಿಗಳಿಗೂ ಆಸ್ಪತ್ರೆಯ ಅವಶ್ಯವಿಲ್ಲ.
ಯಾವ ಪ್ರಾಣಿಯೂ ಸಲಿಂಗಕಾಮಿ ಆಗಿರುವದ್ದನ್ನು ಕೇಳಿಲ್ಲ 
ಯಾವ ಪ್ರಾಣಿಗೂ ದ್ವಂದ್ವ ದ್ವೇಷ ಅಸೂಯೆಯಾಗಲೀ ಒಂಟಿತನದ ಭಯವಾಗಲಿ ಕಾಡುವುದಿಲ್ಲ ಆಹಾರಕ್ಕಾಗಿ ಅಷ್ಟೇ ಅವುಗಳ ಅನ್ವೇಷಣೆ ಹೋರಾಟ ಒದ್ದಾಟ

ಇವೆಲ್ಲ ನೋಡಿದರೆ ಯಾವ ಪ್ರಾಣಿಗೂ ಮನುಷ್ಯನಿಗೂ ಸೇರಿ ಹುಟ್ಟಿಗೆ ಒಂದು ಘನ ಉದ್ದೇಶವಿರುವುದಿಲ್ಲ ಅನಿಸುತ್ತದೆ ಅವೆಲ್ಲ ನಮ್ಮ ನಂಬಿಕೆಗಳಷ್ಟೇ. ಇದ್ದಷ್ಟು ದಿನ ಬಂದ ಹಾಗೆ ಬದುಕುವುದೇ ಧರ್ಮವೇನೋ ಅನಿಸುತ್ತೆ ಈ ದೃಷ್ಟಿಯಿಂದ ಓಶೋನ ಪ್ರತಿ ವಾಕ್ಯವು ನಿಜವೆನಿಸುತ್ತೆ. 

ಮಠ ಸಿನಿಮಾದಲ್ಲಿ ಜೈಲ್ ಒಂದರ ದೃಶ್ಯದಲ್ಲಿ ಮಂಡ್ಯ ರಮೇಶರ ಡೈಲಾಗ್ ಹೀಗಿದೆ " ಅಲ್ಲ ಕನ್ಲಾ ಬಡ್ಡೆತದೆ ಅವ್ನ್ಯಾವನೋ ನಿನ್ನ ಹೆಂಡ್ರು ಸೀರೆ ಎಳೆದ ಅಂತಾ ಕೊಚ್ಚಿಹಾಕಿ ಡೈಲಿ ನೀನು ಎಳೆಯೊ ಚಾನ್ಸ್ ಮಿಸ್ ಮಾಡ್ಕಂಡ್ಯಲ್ಲ" ಹೀಗೆ ನಾವೆಲ್ಲ ಅದ್ಭುತ ಕ್ಷಣಗಳನೆಲ್ಲ ಯಾವುದೋ ವಿಚಿತ್ರ ಥಿಯರಿಗಳಿಂದ ಕಳೆದುಕೊಳ್ಳುತ್ತಿದ್ದೇವೆ.

ಭಟ್ಟರ ಸಾಲಿನೊಂದಿಗೆ ಈ ತಿಕ್ಕಲು ಲೇಖನವ ಅಂತ್ಯ ಹಾಡುವ:

"ಇಷ್ಟೇ ಸ್ವಾಮಿ ಬಾಳ ಮರ್ಮ
ಬಂದ ಹಾಗೆ ಬದುಕೋದೆ ಧರ್ಮ."
-- 



ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು