ಚೆಲ್ಲಾಪಿಲ್ಲಿ

ಅನುಭವಕ್ಕೆ ಸಿಗದನ್ನು ಕತೆಯಾಗಿಸಲು ಯಾಕೋ ಆಗದೇ, ಕಣ್ಣೆದುರೇ ಗೋಚರಿಸಲ್ಪಡುತಿಹ ಸಾವಿರಾರು ನೋವು, ನಲಿವು,ಈಗೋ,ಪ್ರೀತಿ,ಮಿಕ್ಕೆಲ್ಲವನ್ನು ಸೆರೆಹಿಡಿಯುವ ಒಂದು ಯತ್ನ ಇಲ್ಲಿದೆ. ಒಂದು ವಾಕ್ಯಕ್ಕೂ ಇನ್ನೊಂದು ವಾಕ್ಯಕ್ಕೂ ಸಂಬಂಧವೇ ಇಲ್ಲ ಇಲ್ಲಿ. ಇದೊಂತರಾ ಹೆಗಲಲ್ಲಿ ಕ್ಯಾಮೆರಾ ತಗಲಾಕೊಂಡು ಸಿಕ್ಕ ಸಿಕ್ಕಿದ್ದನ್ನು ಸೆರೆಹಿಡಿಯುವ ಯತ್ನದಂತಿದೆ. ನನ್ನೊಳಗಣ ಮನಸ್ಸೆಂಬ ಅರಿವಿನ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಚಿತ್ರಗಳಿವು. ಒಂದು ಸಲ ಓದಿಬಿಡಿ ಆದದ್ದಾಗಲಿ....


ಬದುಕು ಎಂಬುದು ಎಂದೂ ಜೀನ್ಸ್ ಪ್ಯಾಂಟ್ ತೊಡದ ಕಡೇಪಕ್ಷ ಟೀ ಶರ್ಟ್ ಕೂಡ ಧರಿಸದ ಮಂಜೇಗೌಡನಿದ್ದಂತೆ ಅದಕ್ಕೆ ಅದರದೇ ಆದ ಹಟ, ಅದರದೇ ಆದ ಬೆರಗು. ಎಲ್ಲ ತಿಳಿದುಕೊಂಡೆವು ಎನ್ನುವಷ್ಟರಲ್ಲಿ ಏನೂ ತಿಳಿದಿಲ್ಲ ಎಂದು ಕಾಡುವ ತಬ್ಬಲಿತನ. ಸತ್ಯವೆನ್ನುವುದೇ ಇಲ್ಲ ಹಾಗೇ ಮಿಥ್ಯೆಯೂ ಸಹ. ಅವರವರ ಕಣ್ಣಿನಲ್ಲಿ ಕಾಣುವುದಷ್ಟೇ ಸತ್ಯ. ಇಲ್ಲವಾದಲ್ಲಿ ರಪ್ಪನೆರಗುವ ವಾದಗಳು, ಆಡಂಬರಗಳು, ಎಂದಿಗೂ ಮುಗಿಯದ ಒಣ ಚರ್ಚೆಗಳು. ನಮ್ಮ ಈಗೋವನ್ನು ಕಾಡುವ ಅತೀ ಕ್ಷುಲ್ಲಕ ಕ್ಷಣಗಳು.

ಎಂದಿಗೂ ಕುಡಿಯುವುದಿಲ್ಲ ಎಂದೂ ಅಮ್ಮನಿಗೋ, ಅಪ್ಪನಿಗೋ ಕಡೇಪಕ್ಷ ಬಿಟ್ಟೋಗುವ ಗೆಳತಿಗೋ ಭಾಷೆ ಕೊಟ್ಟು ಫ಼್ರೆಂಡ್ಸ್ ಎದುರು ಸ್ಪ್ರೈಟ್ ಕೋಲಾ ಕುಡಿಯುವ ಹುಡುಗರು ಒಮ್ಮೆ ಕುಡಿದರೆ ಅದಕ್ಕೆ ದಾಸನಾಗಿಬಿಡುವನೆಂಬ ಅವರ ಮೇಲೆ ಅವರಿಗೆ ನಂಬಿಕೆ ಇಲ್ಲದ ಮುಗ್ದರು. ಅವರಲ್ಲೂ ಆಳಕ್ಕಿಳಿಯುವ ಆಸೆಗಳು. ಬಾರಿನಲ್ಲಿ ಬೆತ್ತಲಾದ ಬಯಕೆಗಳು, ದುರ್ನಾತ ಬೀರುವ ವಿಕ್ಷಿಪ್ತ ಅತೃಪ್ತ ಮನಸುಗಳು. ಕಾಣುವ ಕಣ್ಣಿನಲ್ಲಿದೆ ನಿಜವಾದ ಅರಿವು ಇಲ್ಲವಾದಲ್ಲಿ ದೀನರಲ್ಲು ದೇವರ ಕಂಡ ಥೆರೆಸಾ, ವಿವೇಕಾನಂದರೆಲ್ಲ ನಮ್ಮ ಮುಂದೆ ಒಡಾಡುವ ಹುಚ್ಚರಂತೆ ಕಾಣಿಸಿಬಿಡುವ ಗಾಬರಿ. ಅನುಭವಕ್ಕೆ ಈಸಿಯಾಗಿ ದಕ್ಕಬಲ್ಲ ಕಣ್ಣೆದುರಿನ ಘಟನೆಗಳನ್ನು ಬಿಟ್ಟು ಅವುಗಳಾಚೆ ನಿಂತು ಎಂದಿಗೂ ಅರ್ಥವಾಗದ ಬೇಡವಾಗದ ದುಃಖ, ಕ್ಷಣಿಕ ಸುಖ, ಅರ್ಥವೇ ಇಲ್ಲದ ಜಡೆಗಳನ್ನು ಹೆಣೆಯುವ ಸೃಜನಶೀಲ ಹಮ್ಮಿನ ಕತೆಗಾರ. ರಮಿಸುವಲ್ಲಿಯೂ ಈಸಿಕೊಂಡ ಲಂಚದ ನೋಟುಗಳನ್ನು ನೆನಪಿಸಿಕೊಳ್ಳುವ ಲಂಚಕೋರ.

ಎಂದಿಗೂ ಮುಗಿಯದ ವಾದ, ವಾಗ್ಯುದ್ದ, ದ್ವಂದ್ವ, ಪ್ರಶ್ನೆಗಳು. ಬೇಕಾದವರನ್ನು ಬೇಡವಾದಲ್ಲಿ ಕಾಯುವ, ಬೇಡವಾದವರನ್ನು ಕಾದು ಹೋದವರನ್ನು ಬೇಡಿಕೊಳ್ಳುವ ಪರಿ. ಸದಾ ನಗುತ್ತಲೇ ಇರುವ ನಿರ್ಜೀವ ಲಾಫ಼ಿಂಗ್ ಬುದ್ಧ ಎಂದಿಗೂ ಬತ್ತದ ಬಡ ರೈತರ ಕಣ್ಣೀರು. ಜಲಸಚಿವರು ವಂಡರ್ ಲ್ಯಾಂಡ್ ನಲ್ಲಿ ಆಟವಾಡುತ್ತಿದ್ದರೆ ದೂರದ ರಾಯಚೂರಿನಲ್ಲಿ ಬರ. ಅಬಕಾರಿ ಸಚಿವರ ಕಣ್ಣು ಯಾವಗಲೂ ಕೆಂಪು. ಕಾಳೆಲೆದು, ಎಳೆಸಿಕೊಂಡು, ಹೊದ್ದು, ಒದ್ದು, ಬಿದ್ದು, ಗುದ್ದು, ನಕ್ಕು, ಗೆದ್ದು, ಅತ್ತು ಮಾಯಾಕುರ್ಚಿಗೆ ಮೂವರ ಕಾಲುಗಳು. ಅಧಿಕಾರವೂ ಮೊದಲ ಅನುಭವದಂತಾಗಿ ಬಾಚಿದಷ್ಟೇ ಸುಖ, ದೋಚಿದಷ್ಟೇ ಅಮಲು.

ಅದೋ ಅಲ್ಲೊಬ್ಬ ಸ್ಯಾಡಿಸ್ಟ್ ಅವಳೇ ಜೀವ, ಅವಳೇ ಬದುಕು ಎಂಬ ಭ್ರಮೆಯಲ್ಲಿದ್ದರೆ ಅವಳಿಗೆ ಮೂರನೇ ಮಗುವಿನ ಸೂಚನೆ. ಇನ್ನೂ ಇವಳು ಸಾಕು ಎಂದು ಹೊರಟ ಜೀವನ್ಮುಖಿ ಹುಡುಗರ ಬೋಳಿಸಿಕೊಂಡ ಗಡ್ಡಗಳೆಲ್ಲಾ ನೆಲದೊಂದಿಗೆ ಸರಸವಾಡುತ್ತಿವೆ. ಬಸ್ಸಿನಲ್ಲಿನ ಕಂಡಕ್ಟರ್ ಅದೇ ನಗುವಿನೊಂದಿಗೆ ಮುಂದೆಯೂ, ಅದೇ ಸಿಡುಕಿನೊಂದಿಗೆ ಹಿಂದೆಯೂ ಟಿಕೇಟ್ ಹಂಚಿತ್ತಿದ್ದರೆ, ಹುಟ್ಟಿದ ಕೂಸಿಗೆ ತೊಟ್ಟಿಲು ತೆಗೆದುಕೊಂಡು ಹೋಗುವ ಕಾತುರ ಡ್ರೈವರನಿಗೆ.
ಎಲ್ಲವೂ ಮಿಥ್ಯೆ ಆತ್ಮ ಒಂದೇ ನಿಜ ಎಂದೂ ರಸೀತಿ ಹಂಚುವ ಅಶ್ರಮಗಳು. ಯಾರೋ ವಕೀಲನ ಅರ್ಜಿಗೆ ಬೀಗ ಜಡಿದ ಅಶ್ರಮದಲ್ಲಿ ನ್ಯೂಸ್ ಚಾನೆಲ್ ನವರಿಂದ ಕಾಣಿಸಿಕೊಂಡ ಮಸ್ತಿ, ಕೊಹಿನೂರ್ ಕಾಂಡೋಮ್ ಗಳು. ಕಚ್ಚಿದ ನಲ್ಲನ ಗುರುತಾಗಿ ಕಾಲೇಜು ಯುವತಿ ಕನ್ನಡಿಯಲ್ಲಿ ತುಟಿಯನ್ನು ನೋಡಿಕೊಂಡರೆ ಕನ್ನಡಿ ನಿನ್ನ ಆಟ ನಾ ಬಲ್ಲೆ ಎಂದು ಗಹಗಹಿಸಿ ನಕ್ಕಂತೆ. ಗೋಡೆಗಳಿಗೂ ಅವರಿಬ್ಬರ ಆಟ ನೋಡಿ ’ಯಾರಿಗೇಳ್ಹೋಣ ನಮ್ಮ ಪ್ರಾಬ್ಲಮ್ಮು’ ಎಂದು ಯುವತಿಯ ಅಮ್ಮನಿಗೂ ಗೋಗೆರೆಯಬಹುದು.

ಹತ್ತು ವರ್ಷದ ಸುಖ ಸಂಸಾರದ ನಂತರವೂ ಅದೇ ಹತ್ತು ವರ್ಷದ ಹಿಂದೆ ಲಾಲಬಾಗಿನಲ್ಲಿ ಚುಂಬಿಸಿದ ಪ್ರಿಯತಮನೊಂದಿಗೆ ಓಡಿಹೋದ ಗೃಹಿಣಿ. ಅಳುತ್ತಲೇ ಇರುವ ಅವಳ ಕಂದಮ್ಮ. ಹಾದಿಯಲ್ಲಿ ಅಪರೂಪಕ್ಕೆ ಸಿಕ್ಕ ಹಳೇ ಪ್ರೇಯಸಿ, ಅವಳ ನೆನಪೆಲ್ಲ ವಾಂತಿ ಕಾರಿ ಆದ ಹ್ಯಾಂಗೋವರ್. ಮೀಸೆ ಮೂಡದ ಬಾಲಕ ಸೈಜುಗಲ್ಲಿನಲ್ಲಿ ಅವನ್ಯಾವನದೋ ಹಣೆ ಜಜ್ಜಿ ನನಗೆ ಜೋಗಿಯೇ ಪ್ರೇರಣೆ ಎಂಬ ಹೇಳಿಕೆ ಕೊಡುತ್ತಿದ್ದಾನೆ. ಆಕಾಶದಿಂದಲೂ ಜಿಗಿದರೂ ಜಾಕೆಟ್ ನ ಧೂಳೊರೆಸಿಕೊಂಡು ಮೇಲೆಳುವ ಟಾಲಿವುಡ್ ನಾಯಕರು, ಸೊಂಟದಿಂದಲೇ ಪ್ರತ್ಯಕ್ಷವಾಗುವ ಬಾಲಿವುಡ್ ನಟಿಯರು, ಅತ್ತ ರೀಮೇಕ್ ಮಾಡಲಾಗದೇ ಇತ್ತ ಸ್ವಮೇಕ್ ಮಾಡಲಾಗದೇ ಗಾಂಧೀನಗರದಲ್ಲಿ ಅಲೆಯುತಿಹ ಹುಚ್ಚರು.

ಎಷ್ಟೇ ಬರೆದರೂ ಮನದಲ್ಲಿ ಅಚ್ಚೊತ್ತಿದ್ದು ಹಾಳೆಯಲ್ಲಿ ದಾಖಲಾಗುತ್ತಿಲ್ಲ. ಇದೊಂದು ಮಸಣದಿಂದ ಶವವೊಂದು ಹೊರತೆಗೆದು ರಮಿಸುವ ಕ್ರಿಯೆಯಂತೆ. ಹೀಗೆ ನಡೆಯುತ್ತಿರುತ್ತೆ ಜಗವು ಬಿಂದು-ಬಿಂದುಗಳಾಗಿ, ಮಾನವ ಸಂಬಂಧ ಒಗಟು-ಒಗಟುಗಳಾಗಿ.....

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಪ್ರಚಲಿತ ಪೋಸ್ಟ್‌ಗಳು